ಕೇವಲ ಜಾತಿ ಕಾರಣಕ್ಕಾಗಿ ನನ್ನನ್ನು ಅಮಾನತು ಮಾಡಲಾಗಿದೆ, ಅಮಾನತ್ತಾಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ

ಬೆಂಗಳೂರು,ಡಿ.29-ನಾನು ಯಾವುದೇ ತಪ್ಪು ಮಾಡದಿದ್ದರೂ ಕೇವಲ ಜಾತಿ ಕಾರಣಕ್ಕಾಗಿ ನನ್ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸರ್ಕಾರದ ಈ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಸೇವೆಯಿಂದ ಅಮಾನತ್ತಾಗಿರುವ ವಿಧಾನಸಭೆಯ ಕಾರ್ಯದರ್ಶಿ ಎಸ್.ಮೂರ್ತಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತಪ್ಪು ಮಾಡಿದ್ದೇನೆ ಎಂದು ಎಲ್ಲಿಯೂ ಮಾಹಿತಿ ನೀಡಿಲ್ಲ. ಸಿಎಜಿ ವರದಿಯಲ್ಲೂ ಉಲ್ಲೇಖವಾಗಿಲ್ಲ. ಕೇವಲ ದಲಿತ ಎಂಬ ಕಾರಣಕ್ಕಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರದಿಂದ ಅಮಾನತು ಮಾಡಲಾಗಿದೆ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆಂದು ತಿಳಿಸಿದರು.

ವಿಧಾನಸಭೆಯ ಸ್ಪೀಕರ್ ಅವರ ಅನುಮತಿ ಮೇರೆಗೆ ನಾವು ಅಧಿವೇಶನದ ವೇಳೆ ಖರ್ಚು ಮಾಡಿರುತ್ತೇವೆ. ಪ್ರತಿ ಪೈಸೆ ಪೈಸೆಗೂ ಲೆಕ್ಕ ನೀಡಲಾಗುತ್ತದೆ. ನಾನು ಭ್ರಷ್ಟಾಚಾರ ನಡೆಸಿರುವ ಬಗ್ಗೆ ಎಲ್ಲಿಯೂ ಸಾಬೀತಾಗಿಲ್ಲ. ಯಾವ ಉದ್ದೇಶದಿಂದ ನನ್ನನ್ನು ಅಮಾನತು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ನನ್ನ ಸೇವಾವಧಿ ಇನ್ನು 10 ವರ್ಷಗಳ ಕಾಲ ಇದೆ. ವಿಧಾನಸಭೆಯ ಕಾರ್ಯದರ್ಶಿ ಸ್ಥಾನಕ್ಕೆ ಅನೇಕರು ಕಣ್ಣಿಟ್ಟಿದ್ದರು. ಅರ್ಹತೆ ಮೇಲೆ ನನಗೆ ಈ ಹುದ್ದೆ ಸಿಕ್ಕಿತ್ತು. ಸೇವಾವಧಿಯಲ್ಲಿ ನನ್ನ ಮೇಲೆ ಎಲ್ಲಿಯೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿಲ್ಲ. ಕೆಲವರ ಕುತಂತ್ರದಿಂದ ನಾನು ಬಲಿಪಶುವಾಗಿದ್ದೇನೆ. ಕಾನೂನು ಮುಖಾಂತರ ಇದಕ್ಕೆ ಉತ್ತರ ನೀಡುತ್ತೇನೆ ಎಂದು ಮೂರ್ತಿ ಹೇಳಿದರು.

ಹಲವು ವರ್ಷಗಳಿಂದ ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರಿಗೆ ನಾನು ಕಾರ್ಯದರ್ಶಿ ಸ್ಥಾನದಲ್ಲಿ ಕೂರುವುದು ಇಷ್ಟವಿರಲಿಲ್ಲ. ಇದರ ಹಿಂದೆ ದೊಡ್ಡ ಕುತಂತ್ರವೇ ಇದೆ. ಇದಕ್ಕೆಲ್ಲ ನಾನು ಜಗ್ಗುವುದಿಲ್ಲ.ಕಾನೂನಿನ ಹೋರಾಟದಲ್ಲಿ ನನಗೆ ಜಯ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ