ಬೆಂಗಳೂರು, ಡಿ.29- ಆಟೋದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಬ್ಯಾಗನ್ನು ಚಾಲಕ ಪೊಲೀಸ್ ಆಯುಕ್ತರ ಕಚೇರಿಯ ಡಿಸಿಪಿ ಪಿಆರ್‍ಒ ಕಚೇರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಆಟೋ ಚಾಲಕ ಐಷಕ್ ನಿಕಲ್ಸನ್ ಡಬ್ಲ್ಯೂ ಎಂಬುವವರ ಆಟೋರಿಕ್ಷಾದಲ್ಲಿ ಪ್ರಯಾಣಿಕರೊಬ್ಬರು ನಿನ್ನೆ ಮಧ್ಯಾಹ್ನ ಆಟೋ ಹತ್ತಿ ಲೀಡೋ ಮಾಲ್‍ನಲ್ಲಿ ಇಳಿದು ಹೋಗಿದ್ದಾರೆ.
ಕೆಲ ಸಮಯದ ಬಳಿಕ ಆಟೋ ಚಾಲಕ ಐಷಕ್ ತನ್ನ ಆಟೋ ಹಿಂಭಾಗದ ಸೀಟಿನಲ್ಲಿದ್ದ ಬ್ಯಾಗ್ ಇರುವುದನ್ನು ಗಮನಿಸಿದ್ದಾರೆ.
ನಂತರ ಈ ಬ್ಯಾಗನ್ನು ಮಧ್ಯಾಹ್ನ 2.30ರ ಸಮಯದಲ್ಲಿ ಪೊಲೀಸ್ ಆಯುಕ್ತರ ಕಚೇರಿಯ ಪಿಆರ್‍ಒ ಕಚೇರಿಗೆ ತಂದೊಪ್ಪಿಸಿದ್ದಾರೆ.
ನಂತರ ಆಟೋ ಚಾಲಕರ ಸಮ್ಮುಖದಲ್ಲಿಯೇ ಬ್ಯಾಗನ್ನು ಪರಿಶೀಲಿಸಿದಾಗ, ಬ್ಯಾಗ್‍ನಲ್ಲಿದ್ದ ವಿಜಿಟಿಂಗ್ ಕಾರ್ಡ್‍ನ ಮೊಬೈಲ್ ನಂಬರ್‍ಗೆ ಸಂಪರ್ಕಿಸಿದ್ದಾರೆ.
ಈ ಬ್ಯಾಗ್‍ನ ವಾರಸುದಾರ ಮನೋಜ್ ಭರತ್‍ವಾಲ್‍ರನ್ನು ಕಚೇರಿಗೆ ಕರೆಸಿ ಬ್ಯಾಗ್‍ನಲ್ಲಿದ್ದ ಐಡಿ ಕಾರ್ಡ್, ಬೀಗದ ಕೀ, ಡೆಲ್ ಕಂಪೆನಿ ಲ್ಯಾಪ್‍ಟಾಪ್ ಮತ್ತು ಚಾರ್ಜರ್ ಅನ್ನು ಒಪ್ಪಿಸಿದ್ದಾರೆ.
ಆಟೋ ಚಾಲಕರಾದ ಐಷಕ್ ನಿಕಲ್ಸನ್ ಡಬ್ಲ್ಯೂ ಅವರ ಪ್ರಾಮಾಣಿಕತೆಯನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.