ಬೆಂಗಳೂರು, ಡಿ.28-ಹನ್ನೊಂದನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.7 ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಹಾಗೂ ಚಲನಚಿತ್ರೋತ್ಸವ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, 60 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಚಲನಚಿತ್ರೋತ್ಸವದಲ್ಲಿ ನಡೆಯಲಿದೆ. ಓರಾಯನ್ ಮಾಲ್ನ 11 ಸ್ಕ್ರೀನ್ಗಳಲ್ಲಿ ಪ್ರದರ್ಶನ ನಡೆಸಲಾಗುತ್ತದೆ.
ನಾಡಿನ ಜನರಿಗೆ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವ ವೀಕ್ಷಣೆ ಹಾಗೂ ಚಲನಚಿತ್ರಗಳಿಗೆ ಇಂತಹ ಉತ್ಸವಗಳಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ದೇಶ-ವಿದೇಶಗಳ 7 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಚಲನಚಿತ್ರೋತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದ್ದು ಮೂರು ಬಹುಮಾನಗಳನ್ನು ನೀಡಲಾಗುತ್ತದೆ.
ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಹಣ ಖರ್ಚು ಮಾಡುವುದಕ್ಕಿಂತ ಮುಖ್ಯವಾಗಿ ಗುಣಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ ನೀಡಲಾಗುತ್ತಿದೆ. ಚಲನಚಿತ್ರೋತ್ಸವ ಯಶಸ್ವಿಗೊಳಿಸಲು ಬೇಕಾದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬೇರೆ ಬೇರೆ ಭಾಷೆ ಚಿತ್ರಗಳೂ ಕೂಡ ಪ್ರದರ್ಶನವಾಗಲಿದ್ದು ನಾಡಿನ ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿ ಚಲನಚಿತ್ರೋತ್ಸವ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳು ನಡೆಯಲಿವೆ.
ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿ ಹಳ್ಳಿಚಂದ್ರಶೇಖರ್ ಮಾತನಾಡಿ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಫೆಬ್ರವರಿ ತಿಂಗಳ ಮೊದಲ ಗುರುವಾರ ನಡೆಸಲು ತೀರ್ಮಾನಿಸಲಾಗಿದೆ.ಪ್ರತಿವರ್ಷವೂ ಫೆಬ್ರವರಿ ತಿಂಗಳ ಮೊದಲ ಗುರುವಾರ ಚಲನಚಿತ್ರೋತ್ಸವ ಆರಂಭವಾಗಲಿದೆ.ಈ ಬಾರಿ ಚಲನಚಿತ್ರೋತ್ಸವವನ್ನು ಅದ್ಧೂರಿ ವೆಚ್ಚಕಿಂತ ಅರ್ಥಪೂರ್ಣವಾಗಿರಬೇಕೆಂಬ ನಿಟ್ಟಿನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚಿತ್ರ ನಿರ್ದೇಶಕ ವಿದ್ಯಾಶಂಕರ್ ಮಾತನಾಡಿ, ಕನ್ನಡ ಭಾರತೀಯ ಭಾಷೆಗಳು ಹಾಗೂ ಏಷ್ಯನ್ ಚಿತ್ರಗಳ ವಿಭಾಗದಲ್ಲಿ ಮೂರು ರೀತಿಯ ಸ್ಪರ್ಧೆಗಳಿರುತ್ತವೆ. ಕಳೆದ ಹತ್ತು ವರ್ಷಗಳಿಂದಲೂ ಇದೇ ರೀತಿ ಚಲನಚಿತ್ರೋತ್ಸವ ನಡೆಸಲಾಗುತ್ತಿದ್ದು, ಈ ವರ್ಷವೂ 60 ದೇಶಗಳ 200 ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಂಕಜ್ಕುಮಾರ್ ಪಾಂಡೆ ಮಾತನಾಡಿ, ಈಗಾಗಲೇ 10 ಚಲನಚಿತ್ರೋತ್ಸವಗಳನ್ನು ನಡೆಸಿದ್ದು, ಈ ಬಾರಿ 11ನೇ ಚಲನಚಿತ್ರೋತ್ಸವ ನಡೆಸಲಾಗುತ್ತಿದೆ. ವೆಚ್ಚ ಕಡಿಮೆ ಮಾಡಿ ಗುಣಾತ್ಮಕ ಚಿತ್ರ ಪ್ರದರ್ಶನಕ್ಕೆ ಒತ್ತು ನೀಡಲಾಗುತ್ತಿದೆ.ಕಳೆದ ವರ್ಷ 7 ಸಾವಿರ ಪ್ರತಿನಿಧಿಗಳು ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು ಎಂದರು.
7 ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಏಷ್ಯನ್ ಸಿನಿಮಾ, ಭಾರತೀಯ ಸಿನಿಮಾ, ಕನ್ನಡ ಸಿನಿಮಾ ಸ್ಪರ್ಧೆಗಳಲ್ಲದೆ, ವಿಶ್ವ ಸಿನಿಮಾ, ಸಿಂಹಾವಲೋಕನ, ಗ್ರ್ಯಾಂಡ್ ಕ್ಲಾಸಿಕ್, ಕೆಲವು ದೇಶಗಳ ವಿಶೇಷ ಸಿನಿಮಾ, ಸ್ಮರಣೆ, ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ನೆಟ್ ಪ್ಯಾಕ್, ಜೀವನಚರಿತ್ರೆ ಆಧಾರಿತ ಚಿತ್ರಗಳ ವಿಭಾಗಗಳು ಸೇರಿದಂತೆ ವಿವಿಧ ದೃಷ್ಟಿಕೋನವನ್ನು ಚಿತ್ರೋತ್ಸವದಲ್ಲಿ ಬಿಂಬಿಸಲು ಉದ್ದೇಶಿಸಲಾಗಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ವಾರ್ತಾ ಇಲಾಖೆ ನಿರ್ದೇಶಕ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.