ಕಾಂಗ್ರೇಸ್ ನಾಯಕರ ನಡವಳಿಕೆಯಿಂದ ಬೇಸರಗೊಂಡಿರುವ ಸಿ.ಎಂ

ಬೆಂಗಳೂರು,ಡಿ.28-ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟ, ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ದೊಡ್ಡಣ್ಣನಂತೆ ವರ್ತಿಸುತ್ತಿರುವುದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆಗಳಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರಗೊಂಡಿದ್ದಾರೆಯೇ…?

ಇತ್ತೀಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳಿಂದ ನೊಂದಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್‍ನ ಸಹವಾಸವೇ ಸಾಕು. ನನ್ನನ್ನು ಒಬ್ಬ ಪ್ರಥಮ ದರ್ಜೆ ನೌಕರರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಆಪ್ತರ ಬಳಿ ನೋವು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಯಾವ ಉದ್ದೇಶವಿಟ್ಟುಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೆವೊ ಅದರ ಸದುದ್ದೇಶವೇ ಈಡೇರುತ್ತಿಲ್ಲ. ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿಯೇ ಆಡಳಿತ ನಡೆಸುತ್ತಿದ್ದೇವೆ ಹೊರತು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಸರ್ಕಾರ ರಚನೆ ಮಾಡಿದ ಪ್ರಾರಂಭದಲ್ಲಿ ಕಾಂಗ್ರೆಸ್ ಎಲ್ಲ ರೀತಿಯಲ್ಲಿ ಬೆಂಬಲ ನೀಡಲಿದೆ ಎಂಬ ನಿರೀಕ್ಷೆಯಿತ್ತು.ಆದರೆ ಇತ್ತೀಚೆಗೆ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಕೇಂದ್ರದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದ್ದೇವೆ ಎಂಬ ಅಹಂನಿಂದ ಜೆಡಿಎಸ್ ಪಕ್ಷವನ್ನೇ ಮುಗಿಸಲು ಹೊರಟಿದ್ದಾರೆ.

ನನಗೆ ಕುರ್ಚಿಗಿಂತ ಪಕ್ಷ ಮುಖ್ಯ. ಎಲ್ಲಿಯ ತನಕ ಆಟ ಆಡುತ್ತಾರೋ ಆಡಲಿ. ಎಲ್ಲವನ್ನು ತಾಳ್ಮೆಯಿಂದ ನೋಡುತ್ತಿದ್ದೇನೆ. ಸೂಕ್ತ ಸಂದರ್ಭದಲ್ಲಿ ನನ್ನ ನೋವನ್ನು ಹೊರ ಹಾಕುತ್ತೇನೆ ಎಂದು ಎಚ್ಚರಿಸಿದ್ದಾರೆ.

ನಾನು ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಲು ಮುಂದಾದಗಲೇ ಸಿದ್ದರಾಮಯ್ಯ ತಮ್ಮ ಅಸಲಿ ಬುದ್ದಿ ಏನೆಂಬುದನ್ನು ತೋರಿಸಿದ್ದರು.ರೈತರ ಸಾಲಮನ್ನಾ ವಿಷಯದಲ್ಲೂ ಜೆಡಿಎಸ್‍ಗೆ ಶ್ರೇಯಸ್ಸು ಸಿಗುತ್ತದೆ ಎಂಬು ಕಾರಣಕ್ಕಾಗಿ ಅದನ್ನೂ ಸಹಿಸಿಕೊಳ್ಳಲಾಗಲಿಲ್ಲ.

ಧರ್ಮಸ್ಥಳಕ್ಕೆ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ತನ್ನ ಬಗ್ಗೆ ಏನು ಹೇಳಿದ್ದಾರೆ, ಅದನ್ನು ಮಾಧ್ಯಮದವರೊಂದಿಗೆ ಯಾರು ಸೋರಿಕೆ ಮಾಡಿದರೂ ಎಂಬುದು ನನಗೂ ಗೊತ್ತು. ಕಾಂಗ್ರೆಸ್‍ನವರ ಈ ಆಟ ಬಹಳ ದಿನ ನಡೆಯಲು ಬಿಟ್ಟರೆ ನಮ್ಮ ಪಕ್ಷದ ಗತಿಯೇನು ಎಂದು ಕುಮಾರಸ್ವಾಮಿ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬದಲಾದ ವರಸೆ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‍ಘಡದಲ್ಲಿ ಕಾಂಗ್ರೆಸ್ ಗೆದ್ದಿದ್ದರಿಂದ ಅವರ ವರಸೆಯೇ ಬದಲಾಯಿತು. ದೇಶದೆಲ್ಲೆಡೆ ಸೋತು ಸುಣ್ಣವಾಗಿದ್ದ ಪಕ್ಷಕ್ಕೆ ಈ ಗೆಲುವು ಟಾನಿಕ್ ನೀಡಿತು. ಈಗ ಜೆಡಿಎಸ್ ಸಹವಾಸವೇ ಬೇಡ ಎಂಬಂತೆ ವರ್ತಿಸುತ್ತಿದ್ದಾರೆ.ನಾವೇನು ಬೆಂಬಲ ಕೊಡುವಂತೆ ಕಾಂಗ್ರೆಸಿಗರ ಮನೆಗೆ ಹೋಗಿದ್ದೇವಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ನನ್ನನ್ನು ಸೌಜನ್ಯಕ್ಕಾದರೂ ಕೇಳದೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಯಿತು.ಅದರಲ್ಲೂ ನಾನು ಮುಖ್ಯಮಂತ್ರಿಯಾಗಿ ನನಗೆ ಯಾರನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂಬುದು ನನಗೆ ಬಿಟ್ಟಿದ್ದು.

ಏಕಾಏಕಿ ನನ್ನನ್ನು ಕೇಳದೆ ನೇಮಕ ಮಾಡಿದ್ದಾದರೂ ಏಕೆ?ಸಚಿವ ಸಂಪುಟ ಪುನರ್‍ರಚನೆ ಮಾಡುವ ವೇಳೆಯೂ ಮೈತ್ರಿ ಪಕ್ಷವನ್ನು ಹೇಗೆ ನಡೆಸಿಕೊಳ್ಳಬೇಕೆಂಬ ಸೌಜನ್ಯವೂ ಕಾಂಗ್ರೆಸ್‍ನವರಿಗೆ ಇಲ್ಲ. ಧನುರ್ ಮಾಸ ಹಾಗೂ ಪ್ರಸ್ತುತ ಸಂದರ್ಭದಲ್ಲಿ ಸಂಪುಟ ಪುನರ್ ರಚನೆ ಮಾಡಿದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡೆವು.

ಆದರೂ ನನ್ನ ಮಾತನ್ನು ಕೇಳದೆ ಸಂಪುಟ ವಿಸ್ತರಣೆ ಮಾಡಬೇಕೆಂದು ಹಠ ಮಾಡಿದರು.ಈಗ ಪರಿಸ್ಥಿತಿ ಏನಾಗಿದೆ ನೋಡಿ ಎಂದು ಕುಮಾರಸ್ವಾಮಿ ತಮ್ಮ ತಂದೆ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ತಮ್ಮ ನೋವು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಚಿತಾವಣೆ:
ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಗಳ ಹಿಂದೆ ಸಮನ್ವಯಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರೇ ಸೂತ್ರಧಾರ ಎಂಬುದು ಕುಮಾರಸ್ವಾಮಿ ಅವರ ಆರೋಪ.

ಮೊದಲಿನಿಂದಲೂ ಜಾರಕಿಹೊಳಿ ಸಹೋದರರು ಸಿದ್ದರಾಮಯ್ಯನವರ ಬೆಂಬಲಿಗರು.ಇಂದು ಪಕ್ಷದ ವಿರುದ್ದ ಸಿಡಿದೆದ್ದಿರುವ ರಮೇಶ್ ಜಾರಕಿಹೊಳಿಗೆ ಅವರು ಒಂದು ಮಾತು ಹೇಳಿದರೆ ಸಾಕು ಎಲ್ಲ ಸಮಸ್ಯೆ ತನ್ನಿಂದ ತಾನೇ ಇತ್ಯರ್ಥವಾಗುತ್ತದೆ.ಆದರೆ ಮಗುವನ್ನು ಚಿವುಟಿ,ತೊಟ್ಟಿಲನ್ನೂ ತೂಗುವ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ಸಿದ್ದರಾಮಯ್ಯ ನನ್ನಿಂದಲೇ ಸರ್ಕಾರ ನಡೆಯುತ್ತದೆ ಎಂಬ ಮನೋಭಾವನೆಗೆ ಬಂದಿದ್ದಾರೆ.

ಕೆಲವು ಸಚಿವರ ಖಾತೆಯನ್ನು ಅದಲುಬದಲು ಮಾಡಿದರೆ ಇನ್ನಷ್ಟು ಬಿಕ್ಕಟ್ಟು ಉಂಟಾಗುತ್ತದೆ ಎಂಬ ಕಾರಣಕ್ಕಾಗಿಯೇ ಈ ಚಿತಾವಣೆಯನ್ನು ನಡೆಸುತ್ತಿದ್ದಾರೆ.
ಈಗ ಅವರು ಜೆಡಿಎಸ್‍ನ ಅವಶ್ಯಕತೆ ಇಲ್ಲ ಎಂಬ ಮನೋಭಾವ ಹೊಂದಿದ್ದಾರೆ. ನಾವು ಕೂಡ ಇದಕ್ಕೆ ಬಗ್ಗಬಾರದು.ಸರಿಯಾದ ಸಂದರ್ಭದಲ್ಲೇ ನಾನು ಕೂಡ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ