ಬೆಂಗಳೂರು,ಡಿ.28- ಮಾಗಿಯ ಚಳಿಯಲ್ಲೂ ಇಂದು ಬೆಳ್ಳಂಬೆಳಗ್ಗೆ ಭ್ರಷ್ಟರ ಮೈ ಬೆವರಿದೆ.
ಇಂದು ನಸುಕಿನ ಜಾವ ಕಾರ್ಯಾಚರಣೆಗಿಳಿದಿರುವ ಎಸಿಬಿ ಅಧಿಕಾರಿಗಳು ಭ್ರಷ್ಟರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಐವರು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರಾಜ್ಯದ 17 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಆರ್.ಶ್ರೀಧರ್, ದಾವಣಗೆರೆ ಕೃಷಿ ಇಲಾಖೆ ಉಪ ನಿರ್ದೇಶಕಿ ಹಂಸವೇಣಿ, ಮಂಗಳೂರು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಡಿ.ಮಂಜುನಾಥ್, ಬೆಂಗಳೂರು ನಗರ ಯೋಜನೆ ಸಹಾಯಕ ನಿರ್ದೇಶಕ ಕೆ.ಬೀಸೆಟಪ್ಪ ಮತ್ತು ಮೈಸೂರು ಮೂಡಾ ಕಿರಿಯ ಅಭಿಯಂತರ ಕೆ.ಮಣಿ ಈ ಐವರು ಅಧಿಕಾರಿಗಳ ಮನೆ ಹಾಗೂ ಕಚೇರಿ, ಸಂಬಂಧಿಕರ ಮನೆ, ತೋಟದ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಆರ್.ಶ್ರೀಧರ್ ಅವರ ಬೆಂಗಳೂರು ನಗರದಲ್ಲಿನ ನಿವಾಸ, ಚಿಂತಾಮಣಿ ನಗರದಲ್ಲಿನ ಇಬ್ಬರು ಸಂಬಂಧಿಕರ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ನಗರದ ಅಲಿ ಅಸ್ಕರ್ ರಸ್ತೆಯ ಸಹಕಾರ ಸಂಘಗಳ ನಿಬಂಧಕರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ದಾವಣಗೆರೆ ಕೃಷಿ ಇಲಾಖೆ ಉಪ ನಿರ್ದೇಶಕಿ ಹಂಸವೇಣಿಯವರ ನಿವಾಸ, ಸಂಬಂಧಿಕರ ಮನೆ, ಕಚೇರಿ ಹಾಗೂ ಇವರು ಪತಿ ಕರ್ತವ್ಯ ನಿರ್ವಹಿಸುತ್ತಿರುವ ಕಾರವಾರದ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿಯಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಡಿ.ಮಂಜುನಾಥ್ ಅವರ ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿನ ವಾಸದ ಮನೆ, ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಬೀಸೆಟಪ್ಪ ಅವರ ಬೆಂಗಳೂರಿನ ನಿವಾಸ, ಕಚೇರಿ ಮತ್ತು ಮೈಸೂರಿನ ಮೂಡಾದ ಕಿರಿಯ ಅಭಿಯಂತರ ಕೆ.ಮಣಿ ಅವರ ನಗರದ ಹೊರವಲಯದಲ್ಲಿನ ನಿವಾಸ, ಹುಣಸೂರು ಪಟ್ಟದಲ್ಲಿನ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆಯೂ ದಾಳಿ ನಡೆಸಲಾಗಿದೆ.
ಈ ಐವರು ಅಧಿಕಾರಿಗಳು ಆದಾಯಕ್ಕಿಂತಲೂ ಹೆಚ್ಚು ಆಸ್ತಿ-ಪಾಸ್ತಿ ಹೊಂದಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದು, ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದೆ.
ವರ್ಷಾಂತ್ಯದಲ್ಲಿ ಸದರಿ ಎಸಿಬಿ ದಾಳಿ ಭ್ರಷ್ಟರ ಎದೆ ನಡುಗಿಸಿದ್ದು, ಶುಕ್ರವಾರ ಸರ್ಕಾರಿ ಅಧಿಕಾರಿಗಳ ಪಾಲಿಗೆ ಅಶುಭ ವಾರವಾಗಿ ಪರಿಣಮಿಸಿದೆ.