ಶಿಕ್ಷಕರ ವರ್ಗಾವಣೆಯಲ್ಲಿ ವಿಶೇಷಚೇತನರಿಗೆ ವಿನಾಯತಿ ನೀಡುವಂತೆ ಒತ್ತಾಯಿಸಿದ ವಿಕಲಚೇತನ ನೌಕರರ ಸಂಘ

ಬೆಂಗಳೂರು, ಡಿ.28-ಶಿಕ್ಷಕರ ವರ್ಗಾವಣೆಯಲ್ಲಿ ಅನುಸರಿಸಲಾಗುವ ನಿಯಮಾವಳಿಗಳಲ್ಲಿ ವಿಶೇಷಚೇತನರಿಗೆ ವಿನಾಯಿತಿ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಅರೆ ಸರ್ಕಾರಿ ವಿಕಲಚೇತನ ನೌಕರರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಡಗಿ ಚಿಲವಾಡಗಿ ಮಾತನಾಡಿ, ಶಿಕ್ಷಕರ ವರ್ಗಾವಣೆಯಲ್ಲಿ ಒಂದು ಸ್ಥಳದಲ್ಲಿ 3 ವರ್ಷ ಸೇವೆ ಸಲ್ಲಿಸಿದರೆ ಮಾತ್ರ ವರ್ಗಾವಣೆಯಲ್ಲಿ ಅವಕಾಶ ಎಂಬ ನಿಯಮವಿದೆ.ಆದರೆ ವಿಶೇಷಚೇತನರಿಗೆ ವಿನಾಯಿತಿ ನೀಡಿ ಪ್ರತಿ ವರ್ಷ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದರು.

ಘಟಕದವರೆಗೆ ಒಂದು ಬಾರಿ ಮಾತ್ರ ವರ್ಗಾವಣೆ ಪಡೆಯಬೇಕೆಂಬ ನಿಯಮದಿಂದಲೂ ಕೂಡ ವಿನಾಯಿತಿ ನೀಡಬೇಕು. ವಿಶೇಷಚೇತನರಿಗೆ ಮಾತ್ರ 3 ವರ್ಷ ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ. ಸರ್ಕಾರಿ ನೌಕರರಲ್ಲೇ ತಾರತಮ್ಯ ಉಂಟು ಮಾಡಿದಂತಾಗುತ್ತದೆ.ಆದ್ದರಿಂದ ಸರ್ಕಾರ ಈ ತಾರತಮ್ಯ ನೀತಿಯನ್ನು ಕೈಬಿಟ್ಟು ವಿಶೇಷಚೇತನರಿಗೂ ವಿನಾಯಿತಿ ನೀಡಬೇಕು.ಇಲ್ಲದಿದ್ದರೆ ನಮ್ಮ ಸಂಘದ ವತಿಯಿಂದ ಮಾರ್ಚ್ ಮೊದಲನೇ ವಾರದಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುವುದಾಗಿ ಎಚ್ಚರಿಸಿದರು.

ವೈದ್ಯಕೀಯ ಪ್ರಮಾಣ ಪತ್ರವನ್ನು ತರಲು ಸೂಚಿಸುವುದನ್ನು ನಿಲ್ಲಿಸಬೇಕು, ಹುದ್ದೆಗಳನ್ನು ಸಮಾನ ರೀತಿಯಲ್ಲಿ ಹಂಚಿಕೆ ಮಾಡಬೇಕು.ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು, ಸರ್ಕಾರಿ ವಿಶೇಷಚೇತನರಿಗೆ ಹಾಗೂ ನಿರುದ್ಯೋಗಿ ವಿಶೇಷಚೇತನರಿಗೆ ನೀಡಲಾಗುವ ರಿಯಾಯಿತಿ ದರ ಪಾಸ್ ಮಿತಿಯನ್ನು ರದ್ದುಗೊಳಿಸಿ ರಾಜ್ಯಾದ್ಯಂತ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ