ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ, ಸ್ಪರ್ಧಿಸುವ ಅಭ್ಯರ್ಥಿಗಳ ಸಂಭವನೀಯ ಪಟ್ಟಿ

ಬೆಂಗಳೂರು,ಡಿ.28- ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಬಿಜೆಪಿ ಮುಂದಿನ ತಿಂಗಳ ಮೊದಲ ವಾರದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಸಭೆಗಳನ್ನು ನಡೆಸಿದ್ದಾರೆ. ಕಳೆದು ಒಂದು ವಾರದಿಂದ ನಿರಂತರವಾಗಿ ಸಂಸದರು, ರಾಜ್ಯಸಭಾ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಆಕಾಂಕ್ಷಿಗಳ ಜೊತೆ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ.

ಜನವರಿ 10ರೊಳಗೆ 28 ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಬೇಕೆಂದು ಅಮಿತ್ ಷಾ ಎಲ್ಲ ರಾಜ್ಯಗಳ ಅಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದಾರೆ.

ಈಗಾಗಲೇ 8ರಿಂದ 10 ಲೋಕಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿರುವ ಯಡಿಯೂರಪ್ಪ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಹೈಕಮಾಂಡ್‍ಗೆ ನೀಡಲಿದ್ದಾರೆ.

ಹಾಲಿ ಸಂಸದರಿಗೆ ಟಿಕೆಟ್:
ಲೋಕಸಭೆ ಚುನಾವಣೆ ವೇಳೆ ಯಾವುದೇ ಹೊಸ ಪ್ರಯೋಗ ಮಾಡದಿರಲು ತೀರ್ಮಾನಿಸಿರುವ ಬಿಜೆಪಿ ಹಾಲಿ ಸಂಸದರಿಗೆ ಮತ್ತೆ ಮಣೆ ಹಾಕಲು ಮುಂದಾಗಿದೆ.
ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಹಾಲಿ ಸಂಸದರೇ ಕಣಕ್ಕಿಳಿಯುವುದು ಖಚಿತವಾಗಿದೆ.ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ.

ಇದೇ ರೀತಿ ದಕ್ಷಿಣ ಕನ್ನಡದಲ್ಲಿ ಹಾಲಿ ಸಂಸದ ನಳಿನ್‍ಕುಮಾರ್ ಕಟೀಲ್‍ಗೆ ಟಿಕೆಟ್ ನೀಡುವ ಬಗ್ಗೆ ಈವರೆಗೂ ಪಕ್ಷದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಹೊಸಬರಿಗೆ ಟಿಕೆಟ್ ನೀಡಬೇಕೆಂದು ಆರ್‍ಎಸ್‍ಎಸ್ ಸೇರಿದಂತೆ ಸ್ಥಳೀಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಹೀಗಾಗಿ ಈ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳು ಕಣಕ್ಕಿಳಿದರೆ ಅಚ್ಚರಿಯಿಲ್ಲ. ಒಂದು ವೇಳೆ ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಹಿಂದೇಟು ಹಾಕಿದರೆ ಈ ಕ್ಷೇತ್ರದಿಂದ ಮಾಜಿ ಸಚಿವ ಜಯಪ್ರಕಾಶ್ ಹೆಗಡೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಈವರೆಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸತತ 6 ಬಾರಿ ಗೆದ್ದು ದಾಖಲೆ ನಿರ್ಮಿಸಿ ಇತ್ತೀಚೆಗಷ್ಟೇ ನಿಧನರಾದ ಅನಂತಕುಮಾರ್ ಅವರಿಂದ ತೆರವಾಗಿರುವ ಕ್ಷೇತ್ರಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ಬಹುತೇಕ ಖಚಿತವಾಗಿದೆ.

ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೇಜಸ್ವಿನಿ ಅವರು ಈವರೆಗೂ ಯಾವುದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ನೀಡಬೇಕೆಂಬುದನ್ನು ವರಿಷ್ಠರೇ ನಿರ್ಧರಿಸಲಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಚಿವ ಡಿ.ವಿ.ಸದಾನಂದಗೌಡ ಸ್ಪರ್ಧಿಸುವ ಬಗ್ಗೆ ಇನ್ನು ಗೊಂದಲದಲ್ಲೇ ಇದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ಒಂದು ಕಾರಣ.

ಹೀಗಾಗಿ ಅವರು ಉಡುಪಿ-ಚಿಕ್ಕಮಗಳೂರಿನತ್ತ ವಲಸೆ ಹೋಗುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದರೆ ಇದೇ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ವರಿಷ್ಠರು ಹಾಗೂ ಯಡಿಯೂರಪ್ಪ ಸೂಚಿಸಿದ್ದಾರೆ.

ಬೆಂಗಳೂರು ಸೆಂಟ್ರಲ್‍ನಿಂದ ಪಿ.ಸಿ.ಮೋಹನ್, ದಾವಣಗೆರೆಯಿಂದ ಜಿ.ಎಂ.ಸಿದ್ದೇಶ್, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ಕೊಪ್ಪಳದಿಂದ ಕರಡಿ ಸಂಗಣ್ಣ ಸೇರಿದಂತೆ ಹಾಲಿ ಸಂಸದರಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಇದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವರಾದ ಬಿ.ಎನ್.ಬಚ್ಚೇಗೌಡ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

ಕಳೆದ ಬಾರಿ ಕಡಿಮೆ ಮತದ ಅಂತರದಿಂದ ಪರಾಭವಗೊಂಡಿದ್ದ ಬಚ್ಚೇಗೌಡ ಇದೊಂದು ಬಾರಿ ಟಿಕೆಟ್ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸ್ಪರ್ಧಿಸಲು ಹಿಂದೇಟು ಹಾಕಿದರೆ ಬಚ್ಚೇಗೌಡರಿಗೆ ಟಿಕೆಟ್ ಬಹುತೇಕ ಖಚಿತವಾಗಲಿದೆ.

ಕೋಲಾರ ಮಿಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಚಿ.ನಾ.ರಾಮು ಹಾಗೂ ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಈಗಾಗಲೇ ಮೂವರು ಆಕಾಂಕ್ಷಿಗಳು ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದು, ನಮಗೇ ಟಿಕೆಟ್ ನೀಡಬೇಕೆಂದು ವರಿಷ್ಠರಲ್ಲಿ ಕೋರಿದ್ದಾರೆ.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಂ.ಶಿವಣ್ಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಈ ಕ್ಷೇತ್ರದಿಂದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ.

ಆದರೆ ಸಕ್ರಿಯ ರಾಜಕಾರಣದಿಂದ ಈಗಾಗಲೇ ದೂರ ಉಳಿದಿರುವ ಶ್ರೀನಿವಾಸ್ ಪ್ರಸಾದ್ ಪುನಃ ಸ್ಪರ್ಧಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ಇನ್ನು ಬಳ್ಳಾರಿ , ರಾಯಚೂರು, ಕಲಬುರಗಿ, ಚಿಕ್ಕೋಡಿ ಕ್ಷೇತ್ರಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಘೋಷಿಸಲು ಪಕ್ಷ ತೀರ್ಮಾನಿಸಿದೆ.

ಸಂಭವನೀಯ ಅಭ್ಯರ್ಥಿಗಳು:
ಬೆಂಗಳೂರು ದಕ್ಷಿಣ-ತೇಜಸ್ವಿನಿ ಅನಂತಕುಮಾರ್
ಬೆಂಗಳೂರು ಉತ್ತರ -ಡಿ.ವಿ.ಸದಾನಂದಗೌಡ
ಬೆಂಗಳೂರು ಕೇಂದ್ರ- ಪಿ.ಸಿ.ಮೋಹನ್
ಬೆಂಗಳೂರು ಗ್ರಾಮಾಂತರ-ಸಿ.ಪಿ.ಯೋಗೇಶ್ವರ್/ ತುಳಸಿ ಮುನಿರಾಜುಗೌಡ
ಚಿಕ್ಕಬಳ್ಳಾಪುರ-ಬಿ.ಎನ್.ಬಚ್ಚೇಗೌಡ/ಕಟ್ಟಾಸುಬ್ರಹ್ಮಣ್ಯ ನಾಯ್ಡು
ಕೋಲಾರ- ಡಿ.ಎಸ್.ವೀರಯ್ಯ/ಚಿ.ನಾ.ರಾಮು/ನಾರಾಯಣಸ್ವಾಮಿ
ಮೈಸೂರು-ಕೊಡಗು- ಪ್ರತಾಪ್ ಸಿಂಹ
ಚಾಮರಾಜನಗರ-ಎಂ.ಶಿವಣ್ಣ /ವಿ.ಶ್ರೀನಿವಾಸಪ್ರಸಾದ್
ತುಮಕೂರು-ಎ.ಎಚ್.ಬಸವರಾಜು
ಚಿತ್ರದುರ್ಗ-ಜನಾರ್ಧನ ಸ್ವಾಮಿ
ಶಿವಮೊಗ್ಗ-ಬಿ.ವೈ.ರಾಘoವೇಂದ್ರ
ದಾವಣಗೆರೆ-ಜಿ.ಎಂ.ಸಿದ್ದೇಶ್ವರ್
ಚಿಕ್ಕಮಗಳೂರು-ಉಡುಪಿ- ಶೋಭ ಕರಂದ್ಲಾಜೆ/ಜಯಪ್ರಕಾಶ್ ಹೆಗಡೆ
ದಕ್ಷಿಣ ಕನ್ನಡ-ನಳಿನ್‍ಕುಮಾರ್ ಕಟೀಲು
ಉತ್ತರ ಕನ್ನಡ- ಅನಂತಕುಮಾರ್ ಹೆಗಡೆ
ಚಿಕ್ಕೋಡಿ-ರಮೇಶ್ ಕತ್ತಿ
ಬೆಳಗಾವಿ-ಸುರೇಶ್ ಅಂಗಡಿ
ಧಾರವಾಡ-ಪ್ರಹ್ಲಾದ್ ಜೋಷಿ
ಹಾವೇರಿ- ಶಿವಕುಮಾರ್ ಉದಾಸಿ
ಕೊಪ್ಪಳ-ಕರಡಿ ಸಂಗಣ್ಣ
ಬೀದರ್-ಭಗವಂತ್ ಕೂಬ
ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್
ವಿಜಾಪುರ-ರಮೇಶ್ ಜಿಗಜಿಣಗಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ