ಜ.15ರಿಂದ ಮೈಸೂರು-ಬೆಂಗಳೂರು ನಡುವಿನ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ, ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು,ಡಿ.28- ಮೈಸೂರು-ಬೆಂಗಳೂರು ನಡುವಿನ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿಯ ಪೂರ್ಣ ಪ್ರಮಾಣದ ಕಾಮಗಾರಿಯನ್ನು ಜ.15ರಿಂದ ಆರಂಭಿಸಲಾಗುವುದು ಎಂದು ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಸ್ತೆ ಅಭಿವೃದ್ದಿ ಕುರಿತಂತೆ ಚರ್ಚೆ ನಡೆಸಿದ್ದು, ಮೈಸೂರು -ಬೆಂಗಳೂರು ನಡುವಿನ 10 ಪಥದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನಪಟ್ಟಣದ ಬಳಿ ಇರುವ ಅರಣ್ಯಭೂಮಿ ವಶ ಕುರಿತಂತೆ ಜ.10ರಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ನಂತರ ಜ.15ರಿಂದ ಪೂರ್ಣಪ್ರಮಾಣದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಈ ಅಭಿವೃದ್ದಿ ಕಾಮಗಾರಿಗಳ ಕುರಿತಂತೆ ಸಚಿವರಿಗೆ ಮನವಿ ಮಾಡಲಾಗಿತ್ತು.ಅರಣ್ಯ ಇಲಾಖೆಯ ಅನುಮತಿ ಪಡೆದು ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ 6 ಪಥದ ರಸ್ತೆ ನಿರ್ಮಾಣ ಪ್ರಸ್ತಾವ ಸಲ್ಲಿಸಲಾಗಿದ್ದು, ಅದರಲ್ಲಿ ನವಲಗುಂದ, ನರಗುಂದ ರಸ್ತೆ ಅಭಿವೃದ್ದಿ , ಹುಬ್ಬಳ್ಳಿಯಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿದ್ದು, ಈ ಅಭಿವೃದ್ದಿ ಕಾಮಗಾರಿಗಳಲ್ಲಿ ರಾಜ್ಯ ಹಾಗೂ ಕೇಂದ್ರದ ಸಹಭಾಗಿತ್ವವಿರಲಿದೆ.

ಹಾಸನ, ಗುಂಡ್ಯ ನಡುವಿನ ರಸ್ತೆ ಅಭಿವೃದ್ದಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದನ್ನು ತ್ವರಿತವಾಗಿ ಪೂರ್ಣಗೊಳಿಸಲು ಚಿಂತನೆ ನಡೆದಿದೆ. ಮೈಸೂರು-ಮಡಿಕೇರಿ, ಮಾಣಿ ನಡುವಿನ ರಸ್ತೆಗಳ ಅಭಿವೃದ್ದಿಗೆ ಛಾರ್ಮಡಿ ಘಾಟ್ ರಸ್ತೆ ಅಗಲೀಕರಣವನ್ನು 250 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುವುದು.

ಕೇರಳದ ಕಣ್ಣೂರಿನಿಂದ ರಾಜ್ಯದ ಚನ್ನರಾಯಪಟ್ಟಣದ ರಸ್ತೆ ಅಭಿವೃದ್ದಿ ಕುರಿತಂತೆ ಸರ್ವೆ ಕಾರ್ಯ ನಡೆದಿದ್ದು, 600 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ಶಿರಾಡಿಘಾಟ್‍ನಲ್ಲಿ ನಾಲ್ಕು ಪಥದ ರಸ್ತೆಯಲ್ಲಿ 21 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳ ಕುರಿತಂತೆಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಬೆಂಗಳೂರು-ಮೈಸೂರು ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲಾಗಿದ್ದು, ಗುತ್ತಿಗೆದಾರರು 20 ಕಿ.ಮೀ ಅಂತರದಲ್ಲಿ ಒಂದು ಕ್ಯಾಂಪ್‍ನಂತೆ 11 ಕ್ಯಾಂಪ್‍ಗಳನ್ನು ನಿರ್ಮಿಸಿ ಕೆಲಸ ನಡೆಸಲಿದ್ದಾರೆ.

ಬೀದರ್, ಗುಲ್ಬರ್ಗ, ಹಾಸನ, ಶಿವಮೊಗ್ಗ, ಕೊಪ್ಪಳಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕುರಿತಂತೆ ಇರುವ ಪ್ರಸ್ತಾವನೆಯಡಿ ಮೂರರಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ವಿವಿರಿಸಿದರು.

ಕೇಂದ್ರರೈಲ್ವೆ ಸಚಿವರನ್ನು ಭೇಟಿ ಮಾಡಿ ಹುಬ್ಬಳ್ಳಿ-ಅಂಕೋಲ ಬೆಂಗಳೂರು ಅರ್ಬನ್ ರೈಲು ಕುರಿತಂತೆ ಚರ್ಚೆ ನಡೆಸಲಾಗಿದೆ. ಚಿಕ್ಕಮಗಳೂರು-ಶೃಂಗೇರಿ, ಶಿವಮೊಗ್ಗ ಮಾರ್ಗದಲ್ಲಿ ರೈಲು ಸಂಚಾರ ಆರಂಭ ಇನ್ನಿತರ ಕಾಮಗಾರಿಗಳ ಬಗ್ಗೆಯೂ ಮಾತುಕತೆ ನಡೆದಿದೆ ಎಂದರು.

ನೈಸ್ ಸಂಸ್ಥೆ ಅವ್ಯವಹಾರ ಆರೋಪ ಕುರಿತಂತೆ ಸದನ ಸಮಿತಿ ವರದಿ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು.ಇದರಲ್ಲಿ ಯಾವುದೇ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ