ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್

ಬೆಂಗಳೂರು, ಡಿ.28-ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸಲು ನಿರ್ಧರಿಸಿರುವ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಕನ್ನಡ ಭಾಷೆ ಉಳಿಸಿ, ಬೆಳೆಸುವತ್ತ ಗಮನಹರಿಸಬೇಕೆಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಕನ್ನಡ ಅನುಷ್ಟಾನ ಮಂಡಳಿ ಮಲ್ಲೇಶ್ವರಂನಲ್ಲಿಂದು ಹಮ್ಮಿಕೊಂಡಿದ್ದ ಕನ್ನಡ ಅಂಕಿ ಬಳಕೆ ಸಪ್ತಾಹಕ್ಕೆ ವಾಹನಗಳಿಗೆ ಕನ್ನಡ ಅಂಕಿ ಬರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜನ ಕನ್ನಡ ಮಾತನಾಡುವುದೆಂದರೆ ಉದಾಸೀನ ಮಾಡುವುದನ್ನು ಕಾಣುತ್ತೇವೆ. ಪಂಪ, ರನ್ನ, ಪೊನ್ನ ರತ್ನತ್ರಯರು ಕನ್ನಡ ಸಂಸ್ಕøತಿಯನ್ನು ಪಸರಿಸಿದ್ದಾರೆ. ನಮ್ಮ ಈ ಪ್ರಾಚೀನ ಭಾಷೆಯ ಬಗ್ಗೆ ಜನ ಬೇಸರ ವ್ಯಕ್ತಪಡಿಸುವುದು ಸರಿಯಲ್ಲ. ಪ್ರತಿನಿತ್ಯ ಕನ್ನಡ ಪದ ಬಳಕೆಯಾಗಬೇಕು ಎಂದು ತಿಳಿಸಿದರು.

ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಕನ್ನಡಿಗರು ತಮಗೆ ಕನ್ನಡ ಶಾಲೆ ಬೇಕೇಬೇಕೆಂದು ಪಟ್ಟು ಹಿಡಿದು ಶಾಲೆ ತೆರೆಸಿದ್ದಾರೆ. ಅಂತಹ ಶಾಲೆಗಳಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡಬೇಕು. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳ ಬಗ್ಗೆ ವ್ಯತಿರಿಕ್ತ ಧೋರಣೆ ತೋರುವುದು ಸರಿಯಲ್ಲ ಎಂದು ಹೇಳಿದರು.

ಪೋಷಕರು, ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು.ವ್ಯವಹಾರಿಕವಾಗಿ ಇಂಗ್ಲೀಷ್ ಬೇಕೇಬೇಕೆಂಬುದು ಸರಿಯಲ್ಲ. ಕನ್ನಡದಲ್ಲೂ ವ್ಯವಹಾರ ಮಾಡಬಹುದು.ಈ ನಿಟ್ಟಿನಲ್ಲಿ ಮಕ್ಕಳಿಗೆ ಮನೆಯಲ್ಲೇ ಕನ್ನಡ ಕಲಿಸಿ.ಅವರಿಗೆ ಕನ್ನಡ ಸಂಸ್ಕøತಿಯ ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು.

ಕನ್ನಡ ಉಳಿಸಿ, ಬೆಳೆಸುವುದು ಕೇವಲ ಸಾರ್ವಜನಿಕರು, ಸಂಘ ಸಂಸ್ಥೆಗಳಿಗಷ್ಟೇ ಸೇರಿದ್ದಲ್ಲ. ರಾಜಕಾರಣಿಗಳ ಜವಾಬ್ದಾರಿಯೂ ಇದೆ. ಕನ್ನಡ ಅನುಷ್ಟಾನ ಮಂಡಳಿ ಮತ್ತಿತರ ಸಂಸ್ಥೆಗಳು ಹಮ್ಮಿಕೊಳ್ಳುವ ಕನ್ನಡ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಪಾಲ್ಗೊಂಡು ನಮ್ಮ ಭಾಷೆ, ಉಳಿಸಿ ಬೆಳೆಸುವಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.

ನಗರದ ಮಾಲೀಕರು ವಾಹನಗಳಿಗೆ ಕನ್ನಡ ಅಂಕಿಗಳನ್ನೇ ಬಳಸುವಂತೆ ಬಿ.ಟಿ.ಲಲಿತಾನಾಯಕ್ ಕೋರಿದರು.

ಕನ್ನಡ ಅನುಷ್ಟಾನ ಮಂಡಳಿ ಅಧ್ಯಕ್ಷ ಆರ್.ಎ.ಪ್ರಸಾದ್ ಮಾತನಾಡಿ, ವಾಹನಗಳ ಮೇಲೆ ಕನ್ನಡ ಅಂಕಿ ಬರೆಯುವಂತೆ ಸರ್ಕಾರದ ಆದೇಶವೇ ಇದೆ. ಆದರೆ ಕನ್ನಡ ಅಂಕಿ ಬರೆದರೆ ಸಂಚಾರಿ ಪೊಲೀಸರು ಕೇಸು ಹಾಕುತ್ತಾರೆ. ಹಾಗಾಗಿ ಸಂಚಾರಿ ಪೊಲೀಸರಿಗೆ ಕನ್ನಡ ಅಂಕಿ ಕಲಿಸುವ ಶಿಬಿರವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಕಳೆದ 2 ದಶಕಗಳಿಂದ ಕನ್ನಡ ಅನುಷ್ಟಾನದ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಈಗ ವಾಹನಗಳ ಮೇಲೆ ಉಚಿತವಾಗಿ ಕನ್ನಡ ಅಂಕಿ ಬರೆಯುವ ಸಪ್ತಾಹವನ್ನು ಪ್ರಾರಂಭಿಸಿದ್ದೇವೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ