ಕೊನೆಗೂ ಶಮನಗೊಂಡ ಖಾತೆ ಹಂಚಿಕೆ ವಿಷಯ

ಬೆಂಗಳೂರು, ಡಿ.28-ಖಾತೆ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಕೊನೆಗೂ ಶಮನಗೊಂಡಿದೆ.ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಿಕ್ಕಟ್ಟು ಬಗೆಹರಿಸುವಲ್ಲಿ ಯಶಸ್ವಿಯಾಗುವುದರ ಜೊತೆಗೆ ತಮ್ಮ ಆಪ್ತರಿಗೆ ಬೇಕಾದ ಖಾತೆಗಳನ್ನು ಕೊಡಿಸುವಲ್ಲಿಯೂ ಮೇಲುಗೈ ಸಾಧಿಸಿದ್ದಾರೆ.

ಹಲವು ಸಚಿವರಿಗೆ ಹೆಚ್ಚುವರಿಯಾಗಿ ಎರಡು ಖಾತೆಗಳನ್ನು ನೀಡಲಾಗಿದೆ. ಗೃಹ ಖಾತೆಯನ್ನು ಬಿಟ್ಟು ಕೊಟ್ಟ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆ ಜೊತೆಗೆ ಸಂಸದೀಯ ವ್ಯವಹಾರ, ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಾಂತ್ರಿಕ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಕೃಷ್ಣ ಭೆರೇಗೌಡ ಅವರಿಗೆ ಒಂದೊಂದೇ ಖಾತೆ ಉಳಿಸಲಾಗಿದೆ. ಪರಮೇಶ್ವರ್ ಬಳಿ ಇದ್ದ ಗೃಹ ಖಾತೆಯನ್ನು ಎಂ.ಬಿ.ಪಾಟೀಲ್ ಅವರಿಗೆ ಮತ್ತು ಯುವಜನ ಸೇವಾ ಇಲಾಖೆ ಖಾತೆಯನ್ನು ರಹೀಮ್ ಖಾನ್ ಅವರಿಗೆ ವಹಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಯನ್ನು ಬಿಟ್ಟುಕೊಟ್ಟ ಡಿ.ಕೆ.ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಖಾತೆ ಜೊತೆಗೆ ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಖಾತೆಯನ್ನು ನೀಡಲಾಗಿದೆ.

ಡಿ.ಕೆ.ಶಿವಕುಮಾರ್ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಇ.ತುಕಾರಾಮ್ ಅವರಿಗೆ ನೀಡಲಾಗಿದೆ. ಕೃಷ್ಣಭೆರೇಗೌಡರ ಬಳಿ ಇದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ವಹಿಸಲಾಗಿದ್ದು, ಈಗ ಅವರ ಬಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಒಂದೇ ಖಾತೆ ಉಳಿದಿದೆ.

ಯು.ಟಿ.ಖಾದರ್ ಬಳಿ ಇದ್ದ ವಸತಿ ಖಾತೆಯನ್ನು ಎಂ.ಟಿ.ಬಿ.ನಾಗರಾಜ್ ಅವರಿಗೆ ನೀಡಲಾಗಿದ್ದು, ನಗರಾಭಿವೃದ್ಧಿ ಖಾತೆಯನ್ನು ಖಾದರ್‍ಗೆ ಬಿಟ್ಟು ಕೊಡಲಾಗಿದೆ.
ಜಯಮಾಲಾ ಬಳಿ ಇದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹೊಣೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲಾಗಿದ್ದು, ಜಯಮಾಲಾ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಣೆ ನೀಡಲಾಗಿದೆ.

ಪಕ್ಷೇತರ ಶಾಸಕ ಆರ್.ಶಂಕರ್ ಅವರ ಬಳಿ ಇದ್ದ ಅರಣ್ಯ, ಪರಿಸರ ಖಾತೆಯನ್ನು ಸತೀಶ್ ಜಾರಕಿ ಹೊಳಿ ಅವರಿಗೆ ನೀಡಲಾಗಿದೆ. ರಮೇಶ್ ಜಾರಕಿಹೊಳಿ ಬಳಿ ಇದ್ದ ಪೌರಾಡಳಿ ಖಾತೆಯನ್ನು ಸಿ.ಎಸ್.ಶಿವಳ್ಳಿ ಅವರಿಗೆ ವಹಿಸಲಾಗಿದೆ.

ಆರ್.ಬಿ.ತಿಮ್ಮಾಪುರ್ ಅವರಿಗೆ ಪೌರಾಡಳಿತ, ಬಂದರು ಮತ್ತು ಕೆ.ಜೆ.ಜಾರ್ಜ್ ಬಳಿ ಇದ್ದ ಸಕ್ಕರೆ ಖಾತೆಯನ್ನು ವಹಿಸಲಾಗಿದೆ. ಪಿ.ಟಿ.ಪರಮೇಶ್ವರ್ ನಾಯಕ್‍ಗೆ ಐಟಿ-ಬಿಟಿ ಮತ್ತು ಮುಜರಾಯಿ ಇಲಾಖೆ ನೀಡಲಾಗಿದೆ.

ಇನ್ನುಳಿದಂತೆ ಎನ್.ಎಸ್.ಶಿವಶಂಕರ್‍ರೆಡ್ಡಿ -ಕೃಷಿ, ಪ್ರಿಯಾಂಕ್ ಖರ್ಗೆ -ಸಮಾಜ ಕಲ್ಯಾಣ, ಜಮೀರ್ ಅಹಮ್ಮದ್ ಖಾನ್ -ಆಹಾರ ಮತ್ತು ನಾಗರಿಕ ಪೂರೈಕೆ, ಶಿವಾನಂದ ಪಾಟೀಲ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೆಂಕಟರಮಣಪ್ಪ -ಕಾರ್ಮಿಕ, ರಾಜಶೇಖರ ಪಾಟೀಲ್ -ಗಣಿ ಮತ್ತು ಭೂ ವಿಜ್ಞಾನ , ಪುಟ್ಟರಂಗಶೆಟ್ಟಿ -ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ