ವಲಸೆ ಬಂದ ಮತ್ತು ಮೂಲ ಕಾಂಗ್ರೇಸ್ಸಿಗರ ಶೀತಲ ಸಮರ

ಬೆಂಗಳೂರು, ಡಿ.28-ಬಹುದಿನಗಳಿಂದ ಮುಗುಮ್ಮಾಗಿದ್ದ ವಲಸೆ-ಮೂಲ ಕಾಂಗ್ರೆಸ್ಸಿಗರ ನಡುವಿನ ಶೀತಲ ಸಮರ ಮುನ್ನೆಲೆಗೆ ಬಂದಿದೆ.

ಸಂಪುಟ ವಿಸ್ತರಣೆ, ಪುನಾರಚನೆ, ಖಾತೆ ಹಂಚಿಕೆ ವಿಷಯದಲ್ಲಿ ಹಿರಿಯ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗಿದ್ದು, ವಲಸಿಗರ ಮಾತಿಗೆ ಮನ್ನಣೆ ನೀಡಲಾಗಿದೆ ಎಂಬ ಆರೋಪ ಪ್ರಬಲವಾಗಿ ಕೇಳಿ ಬಂದಿದ್ದು, ನಿನ್ನೆ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದೆ ಎಂದು ತಿಳಿದುಬಂದಿದೆ.

ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಹಿರಿಯ ನಾಯಕರು ಸಭೆ ಸೇರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮ ಯಾವ ಮಾತಿಗೂ ಹೈಕಮಾಂಡ್ ಮನ್ನಣೆ ನೀಡಿಲ್ಲ. ಎಐಸಿಸಿ ಪ್ರಧಾನಕಾರ್ಯದರ್ಶಿ ಪಕ್ಷದ ಉಸ್ತುವಾರಿ ವೇಣುಗೋಪಾಲ್, ಸಿದ್ದರಾಮಯ್ಯ ಅವರು ಹೇಳಿದ ಮಾತಿಗೆ ಗೋಣು ಆಡಿಸಿದ್ದಾರೆ. ಸಿದ್ದರಾಮಯ್ಯನವರ ಕೈ ಮೇಲಾಗಿದೆ. 40 ವರ್ಷಗಳಿಂದ ಕಾಂಗ್ರೆಸ್‍ನಲ್ಲಿದ್ದವರ ಮಾತಿಗೆ ಹೈಕಮಾಂಡ್ ಯಾವುದೇ ಕಿಮ್ಮತ್ತು ನೀಡಿಲ್ಲ.

13 ವರ್ಷಗಳ ಹಿಂದೆ ಕಾಂಗ್ರೆಸ್‍ಗೆ ಬಂದವರನ್ನು ಪರಿಗಣಿಸಿ ಅವರು ಹೇಳಿದವರನ್ನು ಎಲ್ಲಾ ಕಡೆ ನೇಮಕ ಮಾಡಲಾಗುತ್ತಿದೆ. ಸಂಪುಟ ವಿಸ್ತರಣೆಯಲ್ಲಿ ನಮ್ಮ ಕಡೆಯ ಯಾರನ್ನೂ ನೇಮಕ ಮಾಡಿಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವಲಸೆ ಕಾಂಗ್ರೆಸ್ಸಿಗರಿಗೆ ಕಡಿವಾಣ ಹಾಕಿ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದಾಗಿನಿಂದಲೂ ಮೂಲ ಮತ್ತು ವಲಸಿಗ ಕಾಂಗ್ರೆಸ್ ಎಂಬ ಆರೋಪಗಳು ಹುಟ್ಟಿಕೊಂಡಿದ್ದವು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೂ ವಲಸಿಗ ಕಾಂಗ್ರೆಸ್ಸಿಗರನ್ನು ಮುಖ್ಯಮಂತ್ರಿ ಮಾಡಲಾಗಿದೆ, ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂಬ ಪ್ರಬಲ ಆರೋಪಗಳು ಕೇಳಿ ಬಂದಿತ್ತು.ಆದರೆ ದೇಶಾದ್ಯಂತ ಕಾಂಗ್ರೆಸ್‍ನ ಶಕ್ತಿ ಕುಗ್ಗಿದ ಹಿನ್ನೆಲೆಯಲ್ಲಿ ಈ ಯಾವ ಆರೋಪಗಳಿಗೆ ಮನ್ನಣೆ ನೀಡುವ ಪರಿಸ್ಥಿತಿಯಲ್ಲಿ ಪಕ್ಷ ಇರಲಿಲ್ಲ.

ಪ್ರಸ್ತುತ ಸಂಪುಟ ವಿಸ್ತರಣೆ, ಪುನಾರಚನೆ ಸಂದರ್ಭದಲ್ಲಿ 8 ಜನರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಹಿರಿಯರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಅಮರೇಗೌಡ ಬೈಯ್ಯಾಪುರ್ ಮುಂತಾದವರನ್ನು ಕೈ ಬಿಡಲಾಗಿದೆ.

ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಾಶಶಿಧರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ. ಅದೇ ರೀತಿ ಖರ್ಗೆ ಅವರು ಹೇಳಿದವರನ್ನು ಪರಿಗಣಿಸಿಲ್ಲ. ವೀರಪ್ಪ ಮೊಯ್ಲಿ ಅವರ ಬೆಂಬಲಿಗರಿಗೆ ಆದ್ಯತೆ ನೀಡಿಲ್ಲ.

ಇದೇ ರೀತಿ ಮುಂದುವರೆದರೆ ಸಂಪೂರ್ಣವಾಗಿ ಮೂಲೆಗುಂಪು ಮಾಡುತ್ತಾರೆ ಎಂದು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.ಇವರಿಗೆ ಬೇಕಾದವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.

ಬಾಲಬುಡುಕರಿಗೆ ಆದ್ಯತೆ ನೀಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಕೂಡ ಆರೋಪಿಸಿದ್ದರು.

ಉತ್ತರ ಕರ್ನಾಟಕದವರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಹೇಳಲಾಗಿದೆ.ಆದರೆ ಜಾತಿವಾರು, ಭೌಗೋಳಿಕವಾಗಿ ಆದ್ಯತೆ ನೀಡುವಲ್ಲಿ ಸಿದ್ದರಾಮಯ್ಯ ಎಡವಿದ್ದಾರೆ. ಹಿರಿಯರ ಮಾತಿಗೆ ಮನ್ನಣೆ ನೀಡಿಲ್ಲ. ಇದೇ ಧೋರಣೆ ಮುಂದುವರೆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ