ಬೆಂಗಳೂರು, ಡಿ.28-ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿರುವುದು ಮತ್ತು ಖಾತೆ ಬದಲಾವಣೆ ಮಾಡಿರುವ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡುವುದಾಗಿ ಇಂದಿಲ್ಲಿ ಹೇಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಚಿವರಿಗೆ ಹಂಚಲಾದ ಖಾತೆ, ಬದಲಾದ ಖಾತೆ ಪಟ್ಟಿಯನ್ನು ಇಂದೇ ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗುವುದು ಎಂದರು.
ಕಾಂಗ್ರೆಸ್ನವರು ಪಾರುಪತ್ಯ ಸಾಧಿಸುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದಂತೆಯೇ ಎಲ್ಲಾ ನಡೆಯುತ್ತಿದೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಆರೋಪ ಮಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹೊರಟ್ಟಿ ಅವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಜಕೀಯ ಕಾರ್ಯದರ್ಶಿಗಳ ನೇಮಕ, ನಿಗಮ ಮಂಡಳಿಗಳ ನೇಮಕ, ಸಂಪುಟ ವಿಸ್ತರಣೆ, ಪುನಾರಚನೆ ಯಾವ ವಿಷಯದಲ್ಲೂ ಅಸಮಾಧಾನವಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಮುಂಚಿತವಾಗಿಯೇ ಕೋರಿದ ಅವರು, ಹೊಸ ವರ್ಷ ರಾಜ್ಯದ ಜನರಿಗೆ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ ನೀಡುವಂತಾಗಲಿ ಎಂದು ಹಾರೈಸಿದರು.
ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಕಾಂಗ್ರೆಸ್ ಸಚಿವರ ಖಾತೆ ಪಟ್ಟಿಯನ್ನು ಮುಖ್ಯಮಂತ್ರಿಯವರಿಗೆ ತಲುಪಿಸಿದ್ದರು.