ನವದೆಹಲಿ: ತ್ರಿವಳಿ ತಲಾಕ್ ಪರಿಷ್ಕೃತ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಕಾವೇರಿದ ಸುದೀರ್ಘ ನಾಲ್ಕು ಗಂಟೆಗಳ ಚರ್ಚೆಯ ನಂತರ ಮಸೂದೆಯನ್ನು ಮತಕ್ಕೆ ಹಾಕಲಾಯಿತು.
ತ್ರಿವಳಿ ತಲಾಕ್ ಮಸೂದೆ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳು ಜಂಟಿ ಸದನ ಸಮಿತಿಗೆ ಒಪ್ಪಿಸಲು ಬಿಗಿಪಟ್ಟು ಹಿಡಿದವು. ಮಸೂದೆಯಲ್ಲಿ ಕೆಲವು ಅಂಶಗಳು ಅಸಾಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ (ತ್ರಿವಳಿ ತಲಾಕ್ ಮಸೂದೆ) ಯನ್ನು ಎರಡೂ ಸದನಗಳ ಜಂಟಿ ಆಯ್ಕೆ ಸಮಿತಿಗೆ ಉಲ್ಲೇಖಿಸಬೇಕು. ಇದರಲ್ಲಿ ಒಳಗೊಂಡಿರುವ ಅಸಾಂವಿಧಾನಿಕ ಅಂಶಗಳನ್ನು ಮತ್ತೊಮ್ಮೆ ಅವಲೋಕಿಸಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. ಇದಕ್ಕೆ ಇನ್ನಿತರ ಪಕ್ಷಗಳ ಸದಸ್ಯರು ಕೂಡ ಧ್ವನಿಗೂಡಿಸಿದರು.
ಆದರೆ ವಿಪಕ್ಷಗಳ ಒತ್ತಡಕ್ಕೆ ಮಣಿಯದ ಕೇಂದ್ರ ಎನ್ ಡಿಎ ಸರ್ಕಾರ ಜಂಟಿ ಸದನ ಸಮಿತಿಗೆ ಒಪ್ಪಿಸುವುದನ್ನು ಬಲವಾಗಿ ವಿರೋಧಿಸಿತು. ಈ ವೇಳೆ ಕಾಂಗ್ರೆಸ್ ಮತ್ತು ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ಆರ್ಜೆಡಿ ಸದಸ್ಯರು ಸಭಾತ್ಯಾಗ ಮಾಡಿದರು. ಪಕ್ಷಗಳು ಸಭಾತ್ಯಾಗ ಮಾಡಿದವು. ಬಳಿಕ ಧ್ವನಿಮತದ ಮೂಲಕ ನಡೆದ ಮತದಾನದಲ್ಲಿ ತ್ರಿವಳಿ ತಲಾಕ್ ಮಸೂದೆಯನ್ನು ಅಂಗೀಕರಿಸಲಾಯಿತು.
ಮತದಾನದಲ್ಲಿ ತ್ರಿವಳಿ ತಲಾಕ್ ಮಸೂದೆ ಪರ 245, ವಿರುದ್ಧ 11 ಮತಗಳು ಚಲಾವಣೆಯಾದವು.
ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನಕ್ಕೆ ಅಸ್ತ್ರವಾಗಿರುವ ತ್ರಿವಳಿ ತಲಾಕ್ ಪದ್ಧತಿಯನ್ನು ನಿಷೇಧಿಸುವ ಸಂಬಂಧ ಈ ಹಿಂದೆಯೇ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದರೂ ರಾಜ್ಯಸಭೆಯ ಅನುಮೋದನೆ ಸಿಗದೆ ಕಾಯಿದೆಯಾಗಿ ರೂಪುಗೊಂಡಿರಲಿಲ್ಲ. ಆದರೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಕಾಯಿದೆ ಜಾರಿಗೆ ತಂದಿತ್ತು. ಸುಗ್ರೀವಾಜ್ಞೆಗೆ ಎರಡೂ ಸದನಗಳ ಅನುಮತಿ ಅನಿವಾರ್ಯವಾಗಿದುದ್ದರಿಂದ ಇಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
lok sabha,triple talaq bill,pass