ಬೆಂಗಳೂರು,ಡಿ.27- ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿದ್ದ ಕರ್ನಾಟಕದ ಸುಪ್ರಸಿದ್ದ ಸೋಮೇಶ್ವರ ದೇವಸ್ಥಾನದ ಶಿಲಾಮೂರ್ತಿಯನ್ನು ಹೊತ್ತೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಶ್ಚರ್ಯವೆಂದರೆ ಸೋಮೇಶ್ವರ ದೇವಸ್ಥಾನದ ವಿಗ್ರಹವನ್ನು ಕಳ್ಳರು ಕದ್ದು ನಾಲ್ಕು ತಿಂಗಳಾದರೂ ಈವರೆಗೂ ಸರ್ಕಾರದ ಗಮನಕ್ಕೆ ಬಂದಿಲ್ಲ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿರುವ ಈ ದೇವಸ್ಥಾನಕ್ಕೆ ಇತ್ತೀಚೆಗೆ ಸಾಯಿ ಗಣೇಶ್ ಎಂಬುವರು ಭೇಟಿ ನೀಡಿದ ವೇಳೆ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೂರ್ತಿ ಕಳುವಾಗಿ ನಾಲ್ಕು ತಿಂಗಳಾಗಿದೆ ಎಂದು ದೇವಸ್ಥಾನದಲ್ಲಿದ್ದ ಭಕ್ತರೊಬ್ಬರು ಸಾಯಿಗಣೇಶ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ನನಗೆ ಈ ವಿಷಯ ಕೇಳಿ ಒಂದು ಕ್ಷಣ ಆಶ್ಚರ್ಯವಾಯಿತು ಎಂದಿದ್ದಾರೆ.
ಮೂರ್ತಿ ಕಳುವಾಗಿ ನಾಲ್ಕು ತಿಂಗಳಾಗಿದ್ದರೂ ಕರ್ನಾಟಕ ಸರ್ಕಾರಕ್ಕೆ ಮಾಹಿತಿಯೇ ಇಲ್ಲ. ಇನ್ನು ಮುಂದಾದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಸಾಯಿ ಗಣೇಶ್ ಅವರ ಈ ಟ್ವಿಟರ್ಗೆ 894 ಮಂದಿ ರಿಟ್ವೀಟ್ ಮಾಡಿದ್ದರೆ, 904 ಮಂದಿ ಲೈಕ್ ಮಾಡಿದ್ದಾರೆ.
ರಾಜೇಶ್ ನಾಯಕ್ ಎಂಬುವರು ನನಗೆ ಈ ವಿಷಯವನ್ನು ಕೇಳಿ ನಂಬುವುದಕ್ಕೆ ಆಗಲಿಲ್ಲ. ದೇವಸ್ಥಾನದ ಮೂರ್ತಿ ಕಳುವಾಗಿ ನಾಲ್ಕು ತಿಂಗಳಾದರೂ ಸರ್ಕಾರದ ಗಮನಕ್ಕೆ ಬಾರದಿರುವುದು ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮನ್ನೂರ್ ಶ್ರೀನಿವಾಸ್ ಎಂಬುವರು ಕರ್ನಾಟಕ ಸರ್ಕಾರಕ್ಕೆ ದೇವಸ್ಥಾನಗಳ ರಕ್ಷಣೆ ಬೇಕಿಲ್ಲ. ಬದಲಿಗೆ ದೇವಸ್ಥಾನದ ಹುಂಡಿಯಲ್ಲಿರುವ ಹಣದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ ಎಂದು ಟೀಕಿಸಿದ್ದಾರೆ.
ವೆಂಕಟೇಶ್ ಕುಲಕರ್ಣಿ ಎಂಬುವರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಸನ ಜಿಲ್ಲೆಯವರು. ತವರು ಜಿಲ್ಲೆಯ ದೇವಸ್ಥಾನವನ್ನು ರಕ್ಷಣೆ ಮಾಡದವರು ರಾಜ್ಯವನ್ನು ಕಾಪಾಡುವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಗಿರೀಶ್ ವಾಸುದೇವ ಕುಮಾರಸ್ವಾಮಿಗೆ ಸರ್ಕಾರ ರಕ್ಷಣೆ ಮಾಡಿಕೊಳ್ಳುವುದು ಮುಖ್ಯವೇ ಹೊರತು ದೇವಸ್ಥಾನದ ರಕ್ಷಣೆ ಬೇಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಒಂದು ವೇಳೆ ಮಸೀದಿ ಅಥವಾ ಚರ್ಚ್ನಲ್ಲಿ ಈ ರೀತಿ ಕಳುವಾಗಿದ್ದರೆ ಈಗಾಗಲೇ ಇದು ದೊಡ್ಡ ಸುದ್ದಿಯಾಗುತ್ತಿತ್ತು. ಹಿಂದೂ ದೇವಸ್ಥಾನ ಎಂಬ ಕಾರಣಕ್ಕೆ ಮಾಧ್ಯಮಗಳು ಕೂಡ ನಿರ್ಲಕ್ಷ್ಯ ಮಾಡಿವೆ ಎಂದು ರೋಹಿತ್ ಚಕ್ರಬೂರ್ತಿ ಅಸಮಾಧಾನ ಹೊರಹಾಕಿದ್ದಾರೆ. ಹೀಗೆ ಟ್ವಿಟರ್ಗೆ ಪರ ವಿರೋಧ ವ್ಯಕ್ತವಾಗಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿರುವ ವೀರಸೋಮೇಶ್ವರ ದೇವಸ್ಥಾನವನ್ನು 13ನೇ ಶತಮಾನದಲ್ಲಿ ಹೊಯ್ಸಳ ರಾಜರು ನಿರ್ಮಿಸಿದ್ದರು. ಎಂಬ ಪ್ರತೀತಿ ಇದೆ. ಅರಸೀಕೆರೆ ಸುತ್ತಮುತ್ತ ಸೋಮೇಶ್ವರ, ಈಶ್ವರ, ಚನ್ನಕೇಶವ ದೇವಾಲಯ ಸೇರಿದಂತೆ ಈ ಭಾಗದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದರು.
ಹೊಯ್ಸಳರ ಕಾಲದಲ್ಲಿ ಹಿಂದೂ ಧರ್ಮ ರಕ್ಷಣೆಗೆ ವಿಶೇಷ ಗಮನಹರಿಸಿದ್ದ ರಾಜರು ಗಣಪತಿ, ಶಿವ, ಬ್ರಹ್ಮ, ಸರಸ್ವತಿ, ಪಾರ್ವತಿ ಸೇರಿದಂತೆ ಅನೇಕ ದೇವಸ್ಥಾನಗಳನ್ನು ನಿರ್ಮಿಸಿ ಕರ್ನಾಟಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು.