ನಷ್ಟದಲ್ಲಿರುವ ಸಾರಿಗೆ ಸಂಸ್ಥೆ, ಈ ಹಿನ್ನಲೆಯಲ್ಲಿ ಶೇ 18ರಷ್ಟು ಪ್ರಯಾಣ ದರ ಹೆಚ್ಚಳ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು,ಡಿ.27- ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಶೇ.18ರಷ್ಟು ಬಸ್ ಪ್ರಯಾಣ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಈ ಸಂಬಂಧ ನಾಳೆ ಮುಖ್ಯಮಂತ್ರಿಎ ಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಸರ್ಕಾರಿ ಬಸ್ ಪ್ರಯಾಣ ದರವನ್ನು ಶೇ.18ರಷ್ಟು ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಯುವ್ಯ, ಈಶಾನ್ಯ, ನೈರುತ್ಯ, ಆಗ್ನೇಯ ಮತ್ತು ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳಿಂದ ಒಟ್ಟು 687 ಕೋಟಿ ರೂ. ನಷ್ಟವಾಗಿದೆ. ಇದರಿಂದ ಸಂಸ್ಥೆಯನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಸಿಬ್ಬಂದಿಗೆ ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಹಿಂದೆ ಬಸ್ ಪ್ರಯಾಣ ದರ ಏರಿಸುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅದನ್ನು ತಡೆ ಹಿಡಿಯಲಾಗಿತ್ತು. ದರ ಏರಿಸದೆ ಬೇರೆ ವಿಧಿಯಿಲ್ಲ ಎಂದರು.

ಡೀಸೆಲ್ ದರ ಪ್ರತಿ ಲೀಟರ್‍ಗೆ 53 ರೂ. ಇದ್ದಾಗಲೂ ಟಿಕೆಟ್ ದರ ಈಗಲೂ ಅಷ್ಟೇ ಇದೆ. ಪ್ರಸ್ತುತ ಡೀಸೆಲ್ ದರ 75 ರೂ.ಗೂ ಹೆಚ್ಚಳವಾಗಿದೆ ಎಂದರು.

ಬಸ್‍ಗಳ ಖರೀದಿ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಮೂರು ಸಾವಿರ ಹೊಸ ಬಸ್ ಒದಗಿಸಲಾಗಿದೆ. ಬಿಎಂಟಿಸಿಗೆ ಒಂದೂವರೆ ಸಾವಿರ ಹೊಸ ಬಸ್ ಖರೀದಿ, ಉಳಿದ ಒಂದೂವರೆ ಸಾವಿರ ಬಸ್‍ಗಳನ್ನು ಲೀಸ್ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ವಾಯುವ್ಯ ಕರ್ನಾಟಕ ಸಾರಿಗೆಗೆ 313 ಬಸ್ ಖರೀದಿಸಲು ನಿರ್ಧರಿಸಲಾಗಿದೆ. ಕೆಎಸ್‍ಆರ್‍ಟಿಸಿ ಅಡಿ ಹೆಚ್ಚು ಬಸ್ ಒದಗಿಸಬೇಕೆಂಬ ಬೇಡಿಕೆ ಇದೆ. ಅದರ ಬಗ್ಗೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದರು.

ಆರ್‍ಟಿಒ ಹುದ್ದೆ ಭರ್ತಿ: 271 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆಯನ್ನು ಶೀಘ್ರ ಭರ್ತಿ ಮಾಡಲಾಗುವುದು. ಈಗಾಗಲೇ 139 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಒಟ್ಟು 376 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.

ಖಾಸಗಿ ಬಸ್‍ಗಳಿಗೂ ಜಿಪಿಎಸ್ ಅಳವಡಿಸುವ ಚಿಂತನೆ ಇದೆ. ಈ ಸಂಬಂಧ ಸದ್ಯದಲ್ಲೇ ಇಲಾಖೆ ವತಿಯಿಂದ ಮಂಡಳಿಯ ಸಭೆ ಕರೆಯಲಾಗುವುದು. ಅಲ್ಲಿ ಚರ್ಚಿಸಿದ ನಂತರ ಸಾಧಕಬಾಧಕಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಮತ್ತೊಮ್ಮೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಚೆಕ್‍ ಪೋಸ್ಟ್ಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ಇಲಾಖೆ ಹಲವಾರು ರೀತಿಯ ಕ್ರಮಗಳನ್ನು ಕೈಗೊಂಡಿದೆ. ಜಿಪಿಎಸ್ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ