ಮುಖ್ಯಮಂತ್ರಿ ಪಿಎ ಎಂದು ಅಮಾಯಕರಿಂದ ಕೊಟ್ಯಾಂತರ ರೂ. ವಂಚಿಸಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಡಿ.27- ನಾನು ಮುಖ್ಯಮಂತ್ರಿಗಳ ಪಿಎ , ರಾಜ್ಯ ಸರ್ಕಾರಿ ನೌಕರರ ಉಪಾಧ್ಯಕ್ಷ ಹಾಗೂ ನನಗೆ ಹಲವು ಮಂತ್ರಿಗಳ ಒಡನಾಟವಿದೆ ಎಂದು ಹೇಳಿಕೊಂಡು ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಅಮಾಯಕರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಸರ್ಕಾರದ ಪಶು ಸಂಗೋಪನಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ ಜೆ.ಮಂಜುನಾಥ್ (35) ಬಂಧಿತ ಆರೋಪಿ.
ಆರ್.ಆರ್.ನಗರದ ಬಿಇಎಂಎಲ್ ಲೇ ಔಟ್‍ನ ಲಕ್ಷ್ಮಿ ಕೃಷ್ಣ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಈತ ಸಭೆ ಸಮಾರಂಭಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ಹಲವು ಮಂತ್ರಿಗಳು , ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರೊಂದಿಗೆ ಪೋಟೋ ತೆಗೆಸಿಕೊಂಡು ಅದನ್ನೇ ಬಂಡವಾಳವನ್ನಾಗಿಸಿಕೊಂಡು ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಅಮಾಯಕರಿಂದ ಹಣವನ್ನು ಪಡೆದು ಕೆಲಸ ಕೊಡಿಸದೆ ವಂಚಿಸಿದ್ದನು.

ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಗಂಭೀರತೆಯನ್ನು ಅರಿತು ನಗರ ಪೊಲೀಸ್ ಆಯುಕ್ತರು ತನಿಖೆಯನ್ನು ಸಿಸಿಬಿ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶಿಸಿದ್ದರು.

ಸಿಸಿಬಿ ಘಟಕದ ಅಧಿಕಾರಿಗಳು ತನಿಖೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿ ಆರೋಪಿ ಮಂಜುನಾಥನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತನ ವಿರುದ್ಧ ಈ ಪ್ರಕರಣವಲ್ಲದೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲೂ ಸಹ ವಂಚನೆ ಪ್ರಕರಣ ದಾಖಲಾಗಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವುದು ತನಿಖೆಯಿಂದ ತಿಳಿದು ಬಂದಿದೆ.

ನಗರ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್, ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ವೇಣುಗೋಪಾಲ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ