ಬೆಂಗಳೂರು,ಡಿ.27- ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ನಿಧನರಾದ ನಂತರ ಶಾಸಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ತೆಲಾಂಗಣ ಬಿಜೆಪಿ ಉಸ್ತುವಾರಿ ನೀಡುವ ಮೂಲಕ ಕೇಂದ್ರ ನಾಯಕರು ಸಂಘಟನಾ ಚತುರರನ್ನು ಗುರುತಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ನಿನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು 17 ಜಿಲ್ಲೆಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡುವ ಮೂಲಕ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಕೈಗೊಂಡಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಕರ್ನಾಟಕದವರೊಬ್ಬರಿಗೆ ಹೊರ ರಾಜ್ಯದ ಉಸ್ತುವಾರಿಯನ್ನು ನೀಡಿರುವುದು ವಿಶೇಷ.
ಈ ಮೊದಲು ಕರ್ನಾಟಕದಿಂದ ಕೇಂದ್ರ ಬಿಜೆಪಿ ನಾಯಕರು ಅನಂತ್ಕುಮಾರ್ ಅವರಿಗೆ ಮಾತ್ರ ಉಸ್ತುವಾರಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ನೀಡುತ್ತಿದ್ದರು. ಮಧ್ಯಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಿಗೆ ಅನಂತ್ ಉಸ್ತುವಾರಿಯಾಗಿ ನೇಮಕಗೊಂಡಿದ್ದರು.
ಅಲ್ಲದೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ನೀತಿ, ನಿಯಮಗಳನ್ನು ತೀರ್ಮಾನಿಸುವ ಸಂಸದೀಯ ಮಂಡಳಿಯ ಸದಸ್ಯರೂ ಆಗಿದ್ದರು. ಆದರೆ ಇತ್ತೀಚೆಗೆ ಅವರ ಹಠಾತ್ ನಿಧನದಿಂದಾಗಿ ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು.
ಅನಂತಕುಮಾರ್ ಸ್ಥಾನವನ್ನು ಕೇಂದ್ರದಲ್ಲಿ ತುಂಬುವಂತಹ ಅನೇಕ ನಾಯಕರಿದ್ದರೂ ಅದು ಸಾಧ್ಯವಾಗಿರಲಿಲ್ಲ. ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ರಾಜ್ಯಸಭಾ ಸದಸ್ಯರಾಗಿದ್ದ ಕೆ.ಬಿ.ಶಾಣಪ್ಪ , ರಾಮಜೋಯಿಸ್ ಸೇರಿದಂತೆ ಅನೇಕರು ಇದ್ದರೂ ಅವರ ಪ್ರಭಾವ ಸೀಮಿತ ವ್ಯಾಪ್ತಿಗೆ ಒಳಪಟ್ಟಿತ್ತು.
ಈಗ ಕೇಂದ್ರ ವರಿಷ್ಠರು ಅದರಲ್ಲೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಸಂಘ ಪರಿವಾರ , ಎಬಿವಿಪಿ ಹಿನ್ನೆಲೆಯಿಂದ ಬಂದವರನ್ನು ಗುರುತಿಸಿ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನೀಡುತ್ತಿದ್ದಾರೆ.
ಬುಧವಾರ ಅಮಿತ್ ಷಾ ನೇಮಿಸಿರುವ 17 ಉಸ್ತುವಾರಿಗಳಲ್ಲಿ ಬಹುತೇಕರು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅರವಿಂದ ಲಿಂಬಾವಳಿ ಕೂಡ ಎಬಿವಿಪಿ ಹಿನ್ನೆಲೆಯುಳ್ಳವರಾಗಿದ್ದು, ಸಂಘ ಪರಿವಾರದ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಯಲ್ಲೂ ಲಿಂಬಾವಳಿ ಪ್ರಮುಖ ಜವಾಬ್ದಾರಿಯನ್ನು ನಿಭಾಯಿಸಿದ್ದರು.
ಅಲ್ಲದೆ ಪಕ್ಷ ವಹಿಸುವ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾರೆ. ಹೀಗಾಗಿಯೇ ಅಮಿತ್ ಷಾ ಮೊದಲ ಬಾರಿಗೆ ಕರ್ನಾಟಕದಿಂದ ಹೊರರಾಜ್ಯಕ್ಕೆ ಉಸ್ತುವಾರಿಯನ್ನಾಗಿ ಅರವಿಂದ ಲಿಂಬಾವಳಿಯನ್ನು ನೇಮಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಅಮಿತ್ ಷಾ ಯಾವುದೇ ಒತ್ತಡ, ಲಾಬಿಗೆ ಮಣಿಯುವವರಲ್ಲ. ಅವರವರ ಸಾಮಥ್ರ್ಯವನ್ನು ಸೂಕ್ಷ್ಮವಾಗಿ ಗಮನಿಸಿಯೇ ಇಂಥ ಮಹತ್ವದ ಹುದ್ದೆಯನ್ನು ನೀಡುತ್ತಾರೆ.
ಇದೀಗ ಅರವಿಂದ ಲಿಂಬಾವಳಿಯನ್ನು ಕರ್ನಾಟಕದಿಂದ ಗುರುತಿಸಿ ಉಸ್ತುವಾರಿ ನೀಡುವ ಮೂಲಕ ನಿಷ್ಠಾವಂತ ಕಾರ್ಯಕರ್ತರಿಗೆ ಹೊಸ ಸಂದೇಶವನ್ನು ರವಾನಿಸಿದ್ದಾರೆ.