ಬಿಎಂಟಿಸಿಗೆ 3000 ಹೊಸ ಬಸ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು,ಡಿ.27- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಮೂರು ಸಾವಿರ ಹೊಸ ಬಸ್ ಒದಗಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿಗೆ ಒಂದೂವರೆ ಸಾವಿರ ಹೊಸ ಬಸ್ ಖರೀದಿ, ಉಳಿದ ಒಂದೂವರೆ ಸಾಇವರ ಬಸ್‍ಗಳನ್ನು ಲೀಸ್ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು.

ವಾಯುವ್ಯ ಕರ್ನಾಟಕ ಸಾರಿಗೆಗೆ 313 ಬಸ್ ಖರೀದಿಸಲು ನಿರ್ಧರಿಸಲಾಗಿದೆ. ಕೆಎಸ್‍ಆರ್‍ಟಿಸಿ ಅಡಿ ಹೆಚ್ಚು ಬಸ್ ಒದಗಿಸಬೇಕೆಂಬ ಬೇಡಿಕೆ ಇದೆ. ಅದರ ಬಗ್ಗೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದರು.

ಆರ್‍ಟಿಒ ಹುದ್ದೆ ಭರ್ತಿ: 271 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಎರಡು-ಮೂರು ಕಚೇರಿಗಳಲ್ಲಿ ಒಬ್ಬ ಆರ್‍ಟಿಒ ಕೆಲಸ ಮಾಡುವಂತಾಗಿದೆ. ಅಧಿಕಾರಿಗಳ ಸಮಸ್ಯೆ ಬಗೆಹರಿಸಲು ಕೆಪಿಎಸ್‍ಸಿ ಮೂಲಕ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಆಯ್ಕೆಯಾದ ಬಳಿಕ ಅವರುಗಳಿಗೆ ಒಂದು ವರ್ಷ ತರಬೇತಿ ನೀಡಲಾಗುವುದು. ನಂತರ ಪರೀಕ್ಷೆ ನಡೆಸಿ ಅದರಲ್ಲಿ ತೇರ್ಗಡೆಯಾದವರಿಗೆ ಉದ್ಯೋಗ ನೀಡಲಾಗುವುದು ಎಂದರು.

ಎರಡೂವರೆ ಸಾವಿರದಷ್ಟು ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟೋಲ್‍ಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲಾಗುವುದು ಹಾಗೂ ಎಲ್ಲ ಟೋಲ್‍ಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಿ ಅಲ್ಲಿ ನಡೆಯುವ ವ್ಯವಹಾರಗಳನ್ನು ದಾಖಲಿಸಲಾಗುತ್ತದೆ. ಟೋಲ್‍ಗಳಲ್ಲಿ ವಸೂಲಿ ನಡೆಯುತ್ತಿದೆ ಎಂಬ ದೂರುಗಳು ಬರುತ್ತಿದ್ದು, ಇದರ ಬಗ್ಗೆ ಪರಿಶೀಲಿಸಿ ಹಂತ ಹಂತವಾಗಿ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಪಾರ್ಕಿಂಗ್ ವ್ಯವಸ್ಥೆ ಇದ್ದವರಿಗೆ ಮಾತ್ರ ಕಾರು ಖರೀದಿಸಲು ಪರವಾನಗಿ ನೀಡುವ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಇದೇ ವೇಳೆ ಡಿ.ಸಿ.ತಮ್ಮಣ್ಣ ತಿಳಿಸಿದರು.

ಪಾರ್ಕಿಂಗ್ ಸಮಸ್ಯೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ನಂತರ ಹಂತ ಹಂತವಾಗಿ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ