ಫೆಡ್ ಎಕ್ಸ್‌ ಅಧ್ಯಕ್ಷರಾಗಿ ಭಾರತೀಯ-ಅಮೆರಿಕನ್‌ ರಾಜೇಶ್ ಸುಬ್ರಮಣಿಯನ್ ನೇಮಕ

ಹ್ಯೂಸ್ಟನ್‌: ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್‌ ಡೆಲಿವರಿ ದಿಗ್ಗಜ ಫೆಡ್‌ಎಕ್ಸ್‌ ಎಕ್ಸ್‌ಪ್ರೆಸ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಓ ಆಗಿ ಭಾರತೀಯ-ಅಮೆರಿಕನ್‌ ರಾಜೇಶ್‌ ಸುಬ್ರಮಣಿಯನ್‌ ಅವರನ್ನು ನೇಮಿಸಲಾಗಿದೆ.
ರಾಜೇಶ್ ಅವರು ಸದ್ಯ ಫೆಡ್‌ಎಕ್ಸ್‌ ಕಾರ್ಪೊರೇಶನ್‌ ನ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಹಾಗೂ ಚೀಫ್ ಮಾರ್ಕೆಟಿಂಗ್‌ ಮತ್ತು ಕಮ್ಯುನಿಕೇಶನ್‌ ಆಫೀಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, 2019ರ ಜನವರಿ1ರಿಂದ ಫೆಡ್ ಎಕ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಟೆನಿಸೀಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಫೆಡ್ ಎಕ್ಸ್ ಅಧ್ಯಕ್ಷ ಡೇವಿಡ್‌ ಎಲ್‌ ಕನ್ನಿಂಗ್ ಹ್ಯಾಮ್ ಅವರ ಉತ್ತರಾಧಿಕಾರಿಯಾಗಿ ರಾಜೇಶ್ ಸುಬ್ರಮಣಿಯನ್‌ ಅವರು ನೇಮಕಗೊಂಡಿದ್ದಾರೆ.

ಕೇರಳದ ತಿರುವನಂತಪುರಂ ಮೂಲದ ರಾಜೇಶ್ ಅವರು ಐಐಟಿ-ಬಾಂಬೆಯಲ್ಲಿ ಪದವಿ ಪಡೆದಿದ್ದು, ಕಳೆದ 27 ವರ್ಷಗಳಿಂದ ಫೆಡ್ ಎಕ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ