ಬೆಂಗಳೂರು ಗ್ರಾಮಾಂತರ: ದಕ್ಷಿಣ ಭಾರತದ ಸುಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿ ದನಗಳ ಜಾತ್ರೆಗೆ ಚಾಲನೆ ದೊರೆತಿದೆ.
ದಶಕಗಳ ಇತಿಹಾಸ ಹೊಂದಿರುವ ದನಗಳ ಜಾತ್ರೆಯಲ್ಲಿ ಈ ಬಾರಿ ವಿವಿಧ ತಳಿಯ ರಾಸುಗಳು ಜಮಾಯಿಸಿವೆ. ಈಗಾಗಲೇ ಎತ್ತುಗಳ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, 50 ಸಾವಿರ ರೂಪಾಯಿಂದ 1.5 ಲಕ್ಷ ರೂ. ಮೌಲ್ಯದವರೆಗೂ ರಾಸುಗಳು ಬಿಕರಿಗೆ ಕಾದಿವೆ. ಈ ದನಗಳ ಜಾತ್ರೆಗೆ ಹೈದರಾಬಾದ್ ಕರ್ನಾಟಕ ಭಾಗದ ರೈತರು ಸೇರಿ ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ ನೆರೆರಾಜ್ಯದ ತಮಿಳುನಾಡು, ಹೊಸೂರು, ಆಂಧ್ರ ಪ್ರದೇಶಗಳ ರೈತರು ಆಗಮಿಸುತ್ತಿದ್ದಾರೆ.
ಈ ಬಾರಿಯೂ ಸುಂಕವಿಲ್ಲ: ಕೆಲವು ವರ್ಷದ ಹಿಂದೆ ಜಾತ್ರೆಗೆ ಆಗಮಿಸುವ ರಾಸುಗಳಿಗೆ ಹರಾಜು ಪ್ರಕ್ರಿಯೆ ನಡೆಸಿ ಸುಂಕ ವಿಧಿಸಲಾಗುತ್ತಿತ್ತು. ಕಳೆದ ವರ್ಷ ತೀವ್ರ ಬರದ ಹಿನ್ನೆಲೆಯಲ್ಲಿ ರಾಸುಗಳಿಗೆ ಸುಂಕ ವಿಧಿಸುತ್ತಿಲ್ಲ.
ದೇವಾಲಯಕ್ಕೆ ತೆರಳುವ ವಾಹನಗಳಿಗೆ ಮಾತ್ರ ದೇವಾಲಯದ ಆಡಳಿತ ಮಂಡಳಿ ಸುಂಕ ವಸೂಲಿ ಮಾಡುತ್ತಿದೆ.
ಪ್ಲಾಸ್ಟಿಕ್ ನಿಷೇಧ: ಕುಡಿಯುವ ನೀರು, ವಿದ್ಯುತ್ ದೀಪಗಳನ್ನು ಆಡಳಿತ ಮಂಡಳಿ ಕಲ್ಪಿಸಿದೆ. ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆದು ಜಾನುವಾರು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಜತೆಗೆ ಜಾತ್ರೆ ಆವರಣದಲ್ಲಿ ಪ್ಲಾಸ್ಟಿಕ್ ಮತ್ತು ಬ್ಯಾನರ್, ಫ್ಲೆಕ್ಸ್ ಬಳಕೆ ನಿಷೇಧಿಸಲಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.