ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ರಾಜ್ಯದ ವಿವಿಧ ಯೋಜನೆ ಕುರಿತು ಚರ್ಚೆ ನಡೆಸಿದ ಸಿಎಂ ಹೆಚ್ ಡಿಕೆ

ನವದೆಹಲಿ: ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ನಡುವೆ ಎಲಿವೇಟೆಡ್ ರಸ್ತೆ ನಿರ್ಮಿಸುವ ಕುರಿತು ಕೇಂದ್ರ ಭೂಸಾರಿಗೆ, ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ಸಮ್ಮತಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ ಕೂಡಲೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಕೇಂದ್ರ ಭೂ ಹೆದ್ದಾರಿ ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಹೆದ್ದಾರಿಗಳ ಅಭಿವೃದ್ಧಿ ಕುರಿತು ಸಿಎಂ ಚರ್ಚಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಗೋವಾ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಎ ಪ್ರಸ್ತುತ ಎರಡು ಪಥಗಳದ್ದಾಗಿದ್ದು ಇದರ ಅಗಲೀಕರಣಕ್ಕಾಗಿ ಮುಂದಿನ 18 ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳಸಬಹುದಾದ ಪರ್ಯಾಯ ಸಂಪರ್ಕ ಮಾರ್ಗಗಳ ಅಭಿವೃದ್ಧಿಯನ್ನು ಈ ಯೋಜನೆಯಡಿಯಲ್ಲಿಯೇ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರ್ ಅವರನ್ನು ಮನವಿ ಮಾಡಿದರು.

ಇದಲ್ಲದೆ ಈ ಸಂದರ್ಭದಲ್ಲಿ ಬೇಲೂರು ಹಾಸನ ನಡುವೆ ರಾಷ್ಟ್ರೀಯ ಹೆದ್ದಾರಿ 373ರ ಅಭಿವೃದ್ಧಿ, ಹಾಸನ-ಹೊಳೆನರಸೀಪುರ ಚತುಷ್ಪಥ ರಸ್ತೆ, ಚನ್ನರಾಯಪಟ್ಟಣ-ಹೊಳೆನರಸೀಪುರ-ಅರಕಲಗೂಡು-ಕೊಡ್ಲಿಪೇಟೆ-ಮಡಿಕೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸುವ ಬಗ್ಗೆ ಚರ್ಚಿಸಲಾಯಿತು.

ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ