ಬೆಂಗಳೂರು, ಡಿ.26- ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸ ದ್ವಿಚಕ್ರ ಗಸ್ತು ವಾಹನಗಳ ಸಾರ್ವಜನಿಕ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಗಳ್ಳರ ಗುಂಪುಗಳನ್ನು ಹಿಡಿಯಲು ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಎಂದು ಕರೆ ನೀಡಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಒದಗಿಸಬೇಕಾದ ಸೌಲಭ್ಯಗಳ ಕುರಿತು ನೀಡಿರುವ ವರದಿ ಆಧರಿಸಿ ಬೈಕ್ಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ನೂತನ ವರ್ಷದಲ್ಲಿ ಸಿಬ್ಬಂದಿಗೆ ಉಡುಗೊರೆ ದೊರೆಯಲಿದೆ ಎಂದರು.
ಇದಕ್ಕಾಗಿ ಬಹಳ ದಿನಗಳಿಂದ ಬೇಡಿಕೆ ಇತ್ತು. ಇದನ್ನು ಹೊಸ ವರ್ಷದಲ್ಲಿ ಪೂರೈಸಲಾಗುತ್ತಿದೆ. ಬೆಂಗಳೂರು ನಗರ ಊಹೆಗೂ ಮೀರಿ ಬೆಳವಣಿಗೆ ಸಾಧಿಸುತ್ತಿದೆ. ಆದರೆ, ಸಿಬ್ಬಂದಿ ಕೊರತೆ ಇದ್ದು, ಅದನ್ನು ಸರಿದೂಗಿಸಲು ಚಿಂತನೆ ನಡೆದಿದೆ ಎಂದರು.
ನಗರದ ನಾಗರಿಕರ ರಕ್ಷಣೆ ಮತ್ತು ಮೂಲಸೌಲಭ್ಯಕ್ಕೆ ಏಳು ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ 911ದ್ವಿಚಕ್ರ ವಾಹನ ಒದಗಿಸಲಾಗಿದೆ. ನೂತನ ವರ್ಷದಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸುವಂತಹ ಕೆಲಸವನ್ನು ಪೊಲೀಸ್ ಇಲಾಖೆ ಸಮರ್ಥವಾಗಿ ನಿರ್ವಹಿಸಬೇಕಿದೆ. ಇದಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಸಿದ್ಧವಿದೆ. ಇದೀಗ ನೀಡಲಾಗುತ್ತಿರುವ ಈ ದ್ವಿಚಕ್ರ ವಾಹನ 108 ಪೊಲೀಸ್ ಠಾಣೆಗಳು, 48 ಸಂಚಾರಿ ಠಾಣೆಗಳು ಹಾಗೂ ಮಹಿಳಾ ಪೊಲೀಸ್ ಠಾಣೆಗಳು ಸೇರಿದಂತೆ ಇಲಾಖೆ ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ ಎಂದರು.
ಜನಸಂಖ್ಯೆಒತ್ತಡದ ನಡುವೆ ಕೆಲಸ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗೆ ದ್ವಿಚಕ್ರ ವಾಹನ ಅನುಕೂಲಕರವಾಗಲಿದೆ. ಜತೆಗೆ ನಗರದಲ್ಲಿನ ಸರಗಳ್ಳರ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಮಹಿಳೆಯರ ಆತಂಕ ದೂರ ಮಾಡಬೇಕಾದ ಜವಾಬ್ದಾರಿಯೂ ಇದೆ ಎಂದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, 300 ಹೊಯ್ಸಳ ವಾಹನಗಳೊಂದಿಗೆ 911 ಮೋಟಾರ್ಬೈಕ್ಗಳು ಗಸ್ತುಕಾರ್ಯ ನಿರ್ವಹಿಸಲಿವೆ. ಅಪರಾಧ ಸಂಖ್ಯೆ ನಿಯಂತ್ರಿಸಲು, ಕಾನೂನು ಸುವ್ಯವಸ್ಥೆ ಕಾಪಾಡಲು ಇದರಿಂದ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಗರ ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮಸ್ಯೆಗಳಿಗೆ ತೆರೆದ ಮನಸ್ಸಿನಿಂದ ಸ್ಪಂದಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರ ಪೊಲೀಸ್ ಆಯುಕ್ತ ಸುನಿಲ್ಕುಮಾರ್ ಮಾತನಾಡಿ, ಅಪರಾಧ ನಿಯಂತ್ರಣಕ್ಕೆ ಅಗತ್ಯವಾಗಿದ್ದ 911 ವಾಹನಗಳನ್ನು 150 ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿ ವಿಭಾಗದಲ್ಲೂ 80 ರಿಂದ 85 ವಾಹನಗಳು ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ಚೀತಾ, ಹೊಯ್ಸಳ ವಾಹನಗಳು ಕೆಲಸ ನಿರ್ವಹಿಸುವುದು ಎಂದು ವಿವರಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಅಶ್ವಾರೂಢ ಬೆಂಗಾವಲು ಪಡೆ ಸ್ವಾಗತ ಕೋರಲಾಯಿತು. ಈ ವೇಳೆ ಮುಖ್ಯಮಂತ್ರಿಗಳು ಗೌರವ ರಕ್ಷಣೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು, ಶಾಸಕ ಆರ್.ರೋಷನ್ಬೇಗ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಹಿರಿಯ ಪೊಲೀಸ್ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.