ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲು ಮುಂದಾಗಿರುವ ಸಿ.ಎಂ

ಬೆಂಗಳೂರು, ಡಿ.26- ಹೊಸ ವರ್ಷಕ್ಕೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಲವು ಆಯಕಟ್ಟಿನ ಸ್ಥಳಗಳಿಗೆ ದಕ್ಷ ಅಧಿಕಾರಿಗಳನ್ನು ನೇಮಿಸಲು ಚಿಂತನೆ ನಡೆಸಿದ್ದಾರೆ.

ವಿಶೇಷವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಮಹಾನಗರಗಳ ಆಯುಕ್ತರು, ವಲಯ ಐಜಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬೆಂಗಳೂರು ಮಹಾನಗರದ ಡಿಸಿಪಿಗಳು ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಹಲವು ದಿನಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಮುಂದಾಗಿದ್ದಾರೆ.
ಈ ಸಂಬಂಧ ಈಗಾಗಲೇ ಗೃಹಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಕೆಲವು ಅಧಿಕಾರಿಗಳನ್ನು ವರ್ಗಾಯಿಸಿ ಸಮಾಜಘಾತುಕ ಶಕ್ತಿಗಳಿಗೆ ನಡುಕ ಹುಟ್ಟಿಸುವಂತಹ ಅಧಿಕಾರಿಗಳ ತಂಡವನ್ನು ನೇಮಿಸಲು ಆಲೋಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಸರ ಅಪಹರಣ, ರೌಡಿಗಳ ಉಪಟಳ, ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಪ್ರಭಾವಿಗಳು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೊಸ ಆಯುಕ್ತರನ್ನು ನೇಮಿಸುವ ಬಗ್ಗೆ ಚಿಂತನೆ ನಡೆದಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಹಾಡಹಗಲೇ ಮಹಿಳೆಯರ ಸರ ಅಪಹರಣ, ಕೊಲೆ, ಸುಲಿಗೆ, ರಿಯಲ್ ಎಸ್ಟೇಟ್ ಮಾಫಿಯಾ ತಲೆ ಎತ್ತಿರುವುದು, ರೌಡಿಗಳ ಅಟ್ಟಹಾಸ ಇವೆಲ್ಲವನ್ನು ಗಮನಿಸಿಯೇ ಹೊಸ ಆಯುಕ್ತರನ್ನು ನೇಮಿಸಲು ದೋಸ್ತಿ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ರೇಸ್‍ನಲ್ಲಿ ಹಲವರು: ಅತ್ಯಂತ ಪ್ರತಿಷ್ಠಿತ ಹುದ್ದೆ ಎನಿಸಿರುವ ಬೆಂಗಳೂರು ಮಹಾನಗರದ ಆಯುಕ್ತ ಹುದ್ದೆ ಗಿಟ್ಟಿಸಲು ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಭಾರೀ ಲಾಬಿ ಆರಂಭವಾಗಿದೆ.

ಹಾಲಿ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಅವರ ಮೇಲೆ ಯಾವುದೇ ರೀತಿಯ ಗಂಭೀರ ಆರೋಪಗಳು ಕೇಳಿಬಂದಿಲ್ಲ. ವಿಧಾನಸಭೆ ಚುನಾವಣೆಗೂ ಮುನ್ನ ಹಾಗೂ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸರ್ಕಾರ ಬಂದ ಮೇಲೆ ನಗರದಲ್ಲಿ ತಕ್ಕಮಟ್ಟಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಇಲಾಖಾ ವಲಯದಲ್ಲಿ ಕೇಳಿಬರುತ್ತಿವೆ.

ಅಲ್ಲದೆ, ಸುನಿಲ್‍ಕುಮಾರ್ ಆಯುಕ್ತರಾಗಿ ಈಗಾಗಲೇ 17 ತಿಂಗಳು ಪೂರ್ಣಗೊಳಿಸಿದ್ದಾರೆ. ಸಾಮಾನ್ಯವಾಗಿ ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ವರ್ಷದ ನಂತರ ಆಯುಕ್ತರ ಹುದ್ದೆಯನ್ನು ಮುಂದುವರಿಸುವುದು ತೀರ ಅಪರೂಪ. ಹೀಗಾಗಿ ಸರ್ಕಾರ ವರ್ಗಾವಣೆ ಮಾಡಲು ಮುಂದಾಗಿದೆ.

ಒಂದು ವೇಳೆ ಸುನಿಲ್‍ಕುಮಾರ್ ವರ್ಗಾವಣೆಯಾದರೆ ತೆರವಾಗಲಿರುವ ಈ ಸ್ಥಾನಕ್ಕೆ ಈಗಾಗಲೇ ಹಲವರ ಹೆಸರುಗಳು ಕೇಳಿಬರುತ್ತಿವೆ. ಇವರಲ್ಲಿ ಪ್ರಮುಖವಾಗಿ ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರ್‍ರಾವ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್‍ಪಂಥ್ ಹೆಸರುಗಳು ಮುಂಚೂಣಿಯಲ್ಲಿವೆ.

ಈ ಹಿಂದೆ ಈ ಇಬ್ಬರೂ ಅಧಿಕಾರಿಗಳು ರಾಜ್ಯದ ನಾನಾ ಕಡೆ ಸಮರ್ಥವಾಗಿ ಕೆಲಸ ನಿರ್ವಹಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಬ್ಬರಲ್ಲಿ ಯಾರನ್ನು ನಗರ ಆಯುಕ್ತರ ಹುದ್ದೆಗೆ ಪರಿಗಣಿಸಬೇಕೆಂಬ ಯಕ್ಷಪ್ರಶ್ನೆ ಸರ್ಕಾರಕ್ಕೆ ಎದುರಾಗಿದೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದ ಬೆಂಗಳೂರು ಮಹಾನಗರದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅರ್ಹ ಹಾಗೂ ದಕ್ಷ ಅಧಿಕಾರಿಯನ್ನು ಈ ಹುದ್ದೆಯಲ್ಲಿ ಕೂರಿಸುವ ಬಗ್ಗೆ ಸರ್ಕಾರ ಆಲೋಚಿಸಿದೆ.

ದಕ್ಷತೆ ಹಾಗೂ ಇಲಾಖೆಯನ್ನು ಮುನ್ನಡೆಸುವ ಸಾಮಥ್ರ್ಯವನ್ನೇ ಪರಿಗಣಿಸಿದರೆ ಇಬ್ಬರೂ ಅರ್ಹರಾಗಿದ್ದಾರೆ. ಆದರೆ, ಅಂತಿಮವಾಗಿ ಸರ್ಕಾರದ ಕೃಪೆ ಯಾರ ಮೇಲೆ ಬೀಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಇದರ ಜತೆಗೆ ಇಲಾಖೆಯಲ್ಲಿ ಹಲವು ವರ್ಷಗಳಿಂದ ಆಯಕಟ್ಟಿನಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳ ಎತ್ತಂಗಡಿಗೆ ಪಟ್ಟಿ ಸಿದ್ಧವಾಗಿದೆ. ಇದೇ 31ರಂದು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಎಸಿಪಿ, ಡಿಸಿಪಿ, ಇನ್ಸ್‍ಪೆಕ್ಟರ್ ಹಾಗೂ ಜಿಲ್ಲಾ ಎಸ್‍ಪಿಗಳು, ವಲಯ ಐಜಿಪಿಗಳು ಮಹಾನಗರ ಆಯುಕ್ತರ ಬದಲಾವಣೆಯಾಗಲಿದೆ ಎಂಬ ಗುಸುಗುಸು ಸಚಿವಾಲಯದಲ್ಲಿ ಕೇಳಿಬರುತ್ತಿದೆ.

ಕೆಲವು ಅಧಿಕಾರಿಗಳಿಗೆ ಬಡ್ತಿ ನೀಡಬೇಕಾದ ಅನಿವಾರ್ಯತೆಯೂ ಇರುವುದರಿಂದ ಆಯಕಟ್ಟಿನ ಹುದ್ದೆಗಳಿಗೆ ದಕ್ಷ ಅಧಿಕಾರಿಗಳು ನೇಮಕವಾಗುವ ಸಂಭವವಿದೆ.
ಈ ವೇಳೆಗಾಗಲೇ ಇಲಾಖೆಗೆ ಸರ್ಜರಿ ನಡೆಯಬೇಕಿತ್ತು. ಆದರೆ, ಸಚಿವ ಸಂಪುಟ ಪುನಾರಚನೆಯಾದ ನಂತರ ದೋಸ್ತಿ ಪಕ್ಷ ಕಾಂಗ್ರೆಸ್‍ನಲ್ಲಿ ಸ್ವಲ್ಪ ಮಟ್ಟಿನ ಗೊಂದಲ ಉಂಟಾಗಿರುವುದರಿಂದ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ