ಮಾಜಿ ಪ್ರಧಾನಿ ದಿ.ವಾಜಪೇಯಿ ಅವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ

ಬೆಂಗಳೂರು, ಡಿ.25-ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಕಂಡಿದ್ದ ಕನಸುಗಳನ್ನು ನನಸು ಮಾಡುವತ್ತ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶಂಸಿಸಿದರು.

ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಎಲ್ಲ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂಬುದು ಅಟಲ್‍ಜೀ ಅವರ ಕನಸಾಗಿತ್ತು. 1998 ರಿಂದ 2004ರವರೆಗೆ ಪ್ರಧಾನಿಯಾಗಿದ್ದ ವಾಜಪೇಯಿ ಅವರು ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದಿದ್ದರು. ಅಂದು ನಮ್ಮ ಪಕ್ಷಕ್ಕೆ ಉಂಟಾದ ಸೋಲು ದೇಶದ ಅಭಿವೃದ್ಧಿಗೆ ಮಾರಕವಾಯಿತೆಂದು ವಿಷಾದಿಸಿದರು.

10 ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎ ಅಭಿವೃದ್ಧಿಯನ್ನೇ ಮರೆತಿತ್ತು. ಆದರೆ 2014ರಲ್ಲಿ ದೇಶದ ಜನತೆ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ತಂದ ಪರಿಣಾಮ ಇಂದು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದ್ದೇವೆ. ಇದು ಮೋದಿಯವರ ಸಾಧನೆ ಎಂದು ಬಣ್ಣಿಸಿದರು.

ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಪದೇ ಪದೇ ಗಡಿ ವಿವಾದ ಮುಂದಿಟ್ಟುಕೊಂಡು ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದರು. ಕಾರ್ಗಿಲ್ ಯುದ್ಧವನ್ನು ಗೆಲ್ಲುವ ಮೂಲಕ ಭಾರತ ಸೇನಾ ಸಾಮಥ್ರ್ಯ ಏನೆಂಬುದನ್ನು ತೋರಿಸಿಕೊಟ್ಟ ಮಹಾನುಭಾವ ವಾಜಪೇಯಿ ಅವರು ಎಂದರು.

ದೇಶದಲ್ಲಿ ರಸ್ತೆ ಕ್ರಾಂತಿಯನ್ನು ಆರಂಭಿಸಿದ ರಾಜಕೀಯ ಮುತ್ಸದ್ಧಿ ಅಟಲ್‍ಜೀ ಅವರು, ರಾಷ್ಟ್ರೀಯ ಹೆದ್ದಾರಿಗಳನ್ನು 10 ವರ್ಷ ಯುಪಿಎ ಪೂರ್ಣಗೊಳಿಸಲಿಲ್ಲ. ಇಂದು ಗಡ್ಕರಿ ಅವರು ಕೇಂದ್ರದಲ್ಲಿ ಸಾರಿಗೆ ಸಚಿವರಾದ ನಂತರ ಮತ್ತೊಂದು ಕ್ರಾಂತಿಯನ್ನೇ ಆರಂಭಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಜಪೇಯಿ ದೇಶ ಕಂಡ ಮಹಾನ್ ನಾಯಕ. ವಿರೋಧ ಪಕ್ಷದವರನ್ನೂ ಸಹ ಗೌರವದಿಂದ ನಡೆಸಿಕೊಳ್ಳುತ್ತಿದ್ದ ಮುತ್ಸದ್ಧಿ. ಅವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.

ಶಿವಗಂಗೆಯ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಾಜಪೇಯಿ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಅವರೊಬ್ಬ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಕರ್ನಾಟಕದ ಮೇಲೆ ವಾಜಪೇಯಿ ಅವರಿಗೆ ಅಪಾರವಾದ ಪ್ರೀತಿ, ಗೌರವವಿತ್ತು. ಪ್ರತಿಬಾರಿ ರಾಜ್ಯಕ್ಕೆ ಭೇಟಿ ನೀಡಿದಾಗ ಕರ್ನಾಟಕಕ್ಕೆ ಸರಸ್ವತಿ ಒಲಿದಿದ್ದಾಳೆ. ಇದು ಸರಸ್ವತಿಯ ಬೀಡು ಎನ್ನುತ್ತಿದ್ದರು ಎಂದು ಸ್ಮರಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಿದ್ದ ಮಹಾನ್ ದೂರದೃಷ್ಟಿವುಳ್ಳ ನಾಯಕ. ಎಂದಿಗೂ ಜಾತಿ, ಧರ್ಮಕ್ಕೆ ಸೀಮಿತವಾಗದೆ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟು ದೇಶ ಮುನ್ನಡೆಸಿದ ಅಪರೂಪದ ರಾಜಕಾರಣಿ ಅಟಲ್ ಜೀ ಆಗಿದ್ದರು ಎಂದು ಹೇಳಿದರು.

ಅಬ್ದುಲ್ ಕಲಾಂರಂತಹ ಶ್ರೇಷ್ಟ ತತ್ತ್ವಜ್ಞಾನಿಯನ್ನು ಗುರುತಿಸಿ ಅವರ ಜಾತಿ, ಧರ್ಮ ನೋಡದೆ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವಲ್ಲಿ ವಾಜಪೇಯಿ ಅವರ ಪಾತ್ರ ಪ್ರಮುಖವಾಗಿತ್ತು. ನಮಗೆ ಇಂತಹ ರಾಜಕಾರಣಿಗಳ ಅಗತ್ಯವಿದೆ ಎಂದು ತಿಳಿಸಿದರು.

ಚಿಕ್ಕಪೇಟೆ ವಾರ್ಡ್ ಪಾಲಿಕೆ ಮಾಜಿ ಸದಸ್ಯ ಶಿವಕುಮಾರ್, ಮುಖಂಡರಾದ ಸುಬ್ಬಣ್ಣ, ಎನ್.ಸದಾಶಿವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ