ಬೆಂಗಳೂರು, ಡಿ.25- ಹಂತಕರನ್ನು ಶೂಟ್ ಮಾಡಿ ಎಂದು ಹೇಳಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಹಂತಕರಿಂದ ಜೆಡಿಎಸ್ ಮುಖಂಡ ಹತ್ಯೆಗಿಡಾಗಿರುವುದು ಅತ್ಯಂತ ನೋವಿನ ಸಂಗತಿ. ಆದರೆ ಮುಖ್ಯಮಂತ್ರಿಗಳೇ ಹಂತಕರಿಗೆ ಗುಂಡು ಹಾರಿಸಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕೊಲೆ ಮಾಡಿದವರು ಬಿಜೆಪಿಯವರೇ ಆಗಲೀ, ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಕ್ಕೆ ಸೇರಿರಲಿ. ಕೊಲೆ ಪಾತಕರನ್ನು ಹಿಡಿದು ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿಯವರೇ ಕಾನೂನು ಉಲ್ಲಂಘಿಸುವಂತೆ ಕರೆ ಕೊಟ್ಟರೆ ರಾಜ್ಯದ ಕಾನೂನು ಕಾಪಾಡುವವರು ಯಾರು ಎಂದು ಪ್ರಶ್ನಿಸಿದರು.
ಹಿಂದೆಯೂ ರಾಜ್ಯದಲ್ಲಿ ವಿವಿಧ ಪಕ್ಷದ ಮುಖಂಡರು ಈ ರೀತಿ ಹತ್ಯೆಯಾಗಿದ್ದಾರೆ. ಈ ವೇಳೆ ಹಂತಕರನ್ನು ನಾವು ಶೂಟೌಟ್ ಮಾಡುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿರಲಿಲ್ಲ. ಕುಮಾರಸ್ವಾಮಿ ನೇರವಾಗಿಯೇ ಮಾಧ್ಯಮಗಳ ಮುಂದೆ ದೂರವಾಣಿಯಲ್ಲಿ ಪೊಲೀಸರಿಗೆ ಸೂಚನೆ ಕೊಟ್ಟಿರುವುದು ಬಹಿರಂಗವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಅಪಮಾನ ಮಾಡಿರುವ ಅವರು, ತಕ್ಷಣವೇ ಜನತೆಯ ಕ್ಷಮೆ ಕೇಳಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಕಿತ್ತಾಡಿಕೊಳ್ಳುತ್ತಿರುವುದರಿಂದ ರಾಜ್ಯದ ಅಭಿವೃದ್ದಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿಲ್ಲ. ಭೀಕರ ಬರಗಾಲ ಆವರಿಸಿದ್ದರೂ ಜನರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ದುಡಿಯುವ ಕೈಗಳಿಗೆ ಕೆಲಸ ಇಲ್ಲದಿರುವುದರಿಂದ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಮಾಡಬೇಕಾದ ಕೆಲಸವನ್ನು ಪ್ರತಿಪಕ್ಷವಾಗಿ ಬಿಜೆಪಿ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಬರಪೀಡಿತ ತಾಲೂಕುಗಳಿಗೆ ನಮ್ಮ ಪಕ್ಷದ ವತಿಯಿಂದ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಮುಖ್ಯಮಂತ್ರಿಯವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಪ್ರವಾಸ ನಡೆಸುವಂತೆ ಸೂಚನೆ ಕೊಡದಿದ್ದರೆ, ನಾನೇ ಖುದ್ದು ಜನರ ಸಮಸ್ಯೆ ಆಲಿಸಲು ಪ್ರವಾಸ ಮಾಡುವುದು ಅನಿವಾರ್ಯ ಎಂದು ಯಡಿಯೂರಪ್ಪ ಎಚ್ಚರಿಸಿದರು.