ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು,ಡಿ.24- ಸಚಿವ ಸ್ಥಾನ ಸಿಗದೆ ಭಿನ್ನಮತ ಸಾರಿರುವ ರಮೇಶ್ ಜಾರಕಿಹೊಳಿ ಮತ್ತಿತರರಿಗೆ ದಿನೇಶ್ ಗುಂಡೂರಾವ್ ಹೇಳಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ದಿನೇಶ್ ಗುಂಡೂರಾವ್ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ನಾವು ಅಶಿಸ್ತು ಸಹಿಸುವುದಿಲ್ಲ. ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು.ಅದರಲ್ಲೂ ರಮೇಶ್ ಜಾರಕಿಹೊಳಿ ಪಕ್ಷದ ಶಿಸ್ತು ಉಲ್ಲಂಘಿಸಿರುವುದರಿಂದ ಅವರ ಮೇಲೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಪಕ್ಷ ಇದ್ದರೆ ಸರ್ಕಾರ ಇರುತ್ತದೆ.ನಾವು ಒಂದಿಬ್ಬರ ಬ್ಲಾಕ್‍ಮೇಲ್ ತಂತ್ರಗಳಿಗೆ ಮಣಿದರೆ ನಾಳೆ ಎಲ್ಲರೂ ಇದೇ ತಂತ್ರವನ್ನು ಅನುಸರಿಸುತ್ತಾರೆ.ಯಾರಿಗೆ ಯಾವ ಸ್ಥಾನಮಾನ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ.ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಗಳಿಗೆ ನಾವು ಬದ್ಧರಾಗಿರಬೇಕೆಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಸಂಬಂಧ ಏಕಪಕ್ಷೀಯ ತೀರ್ಮಾನವಾಗಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಅನೇಕ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ರಮೇಶ್ ಜಾರಕಿಹೊಳಿಗೆ ಪಕ್ಷ ಅನ್ಯಾಯ ಮಾಡಿಲ್ಲ. ಅವರಿಗೆ ಎಲ್ಲಾ ಸ್ಥಾನ ಮಾನ ನೀಡಿದೆ. ಆದರೆ ಅವರೇ ಪಕ್ಷ ಶಿಸ್ತು ಉಲ್ಲಂಘಿಸಿದ್ದಾರೆ.ಕಳೆದ 7 ತಿಂಗಳಲ್ಲಿ ಸಚಿವರಾಗಿ ಅವರ ಸಾಧನೆ ಅಷ್ಟಕ್ಕಷ್ಟೆ.ಪಕ್ಷದ ಕೆಲಸಗಳಲ್ಲೂ ನಿರಾಸಕ್ತಿ ವಹಿಸಿದ್ದರು.ಸಚಿವ ಸಂಪುಟ ಸಭೆಗೆ ಗೈರು ಹಾಜರಾದರು.ಹೀಗಾಗಿ ಸಂಪುಟದಿಂದ ಕೈ ಬಿಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ