ಹೊಸದಾಗಿ ಸಚಿವರಾದವರಿಂದ ಖಾತೆಗಳಿಗಾಗಿ ಬೇಡಿಕೆ ಮತ್ತು ಸಚಿವ ಸ್ಥಾನ ಸಿಗದ ಶಾಸಕರ ಪ್ರತ್ಯೇಕ ಸಭೆಯಿಂದ ತಳಮಳಗೊಂಡಿರುವ ಕಾಂಗ್ರೇಸ್

ಬೆಂಗಳೂರು, ಡಿ.24- ಸಂಪುಟ ವಿಸ್ತರಣೆ, ಪುನಾರಚನೆ ನಂತರ ಉಂಟಾದ ಬಿಕ್ಕಟ್ಟು ಕಾಂಗ್ರೆಸ್‍ನಲ್ಲಿ ತಳಮಳ ಸೃಷ್ಟಿಸಿದೆ.ಸಂಪುಟದಿಂದ ಕೈಬಿಟ್ಟಿರುವವರು, ಅತೃಪ್ತರು ಪ್ರತ್ಯೇಕ ಸಭೆ ನಡೆಸುತ್ತಿರುವುದು, ಹಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಆತಂಕ ಉಂಟುಮಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

ಸಚಿವ ಸ್ಥಾನದಿಂದ ಕೈ ಬಿಟ್ಟಿರುವುದರಿಂದ ಪೌರಾಡಳಿತ ಖಾತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ರಾಜೀನಾಮೆ ನೀಡುವ ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನಾಲ್ಕೈದು ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.
ಅವರೊಂದಿಗೆ ಹಲವು ಶಾಸಕರು ಹೆಜ್ಜೆ ಹಾಕಲು ಮುಂದಾಗಿರುವುದು, ಇಂದು ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಅತೃಪ್ತರು ಮಾತುಕತೆ ನಡೆಸಿರುವುದು ಕಾಂಗ್ರೆಸ್ ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸರ್ಕಾರ ರಚನೆಯಾದಾಗಿನಿಂದ ಒಂದಲ್ಲ ಒಂದು ಬಂಡಾಯದ ಸನ್ನಿವೇಶಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಹೊಸ ಸವಾಲು ಎದುರಾಗಿದೆ. ಕಳೆದ ಸೆಪ್ಟೆಂಬರ್‍ನಿಂದ ಕಾಂಗ್ರೆಸ್ ಪಕ್ಷದ ಮೇಲೆ ಪರೋಕ್ಷವಾಗಿ ಕಿಡಿಕಾರುತ್ತಿದ್ದ ರಮೇಶ್ ಜಾರಕಿಹೊಳಿ ಇದೀಗ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೆ ಮಾಧ್ಯಮಗಳ ಮೇಲೂ ಹರಿಹಾಯ್ದಿದ್ದಾರೆ.

ಅನಗತ್ಯವಾಗಿ ಮಾಧ್ಯಮಗಳಲ್ಲಿ ನನ್ನನ್ನು ವಿಲನ್ ಮಾಡಲಾಗಿದೆ.ನನ್ನ ಸಚಿವ ಸ್ಥಾನ ಹೋಗಲು ಮಾಧ್ಯಮಗಳೇ ಕಾರಣ ಎಂದು ಅತೃಪ್ತಿ ಹೊರಹಾಕಿದ್ದಾರೆ.
ಸಚಿವ ಸ್ಥಾನ ವಂಚಿತರು ಸಭೆ ಸೇರಿ ರಾಜ್ಯ ನಾಯಕರ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಲು ನಿರ್ಧರಿಸಿದ್ದಾರೆ. ನಿನ್ನೆಯಷ್ಟೆ ಹಿರಿಯ ಶಾಸಕ ರಾಮಲಿಂಗಾರೆಡ್ಡಿ, ಸುಧಾಕರ್, ಬಿ.ಸಿ.ಪಾಟೀಲ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಕೂಡ ಹಲವರು ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ.

ಅಲ್ಲದೆ, ನಿಗಮ-ಮಂಡಳಿಗಳಲ್ಲಿ ನೀಡಿರುವ ಅಧ್ಯಕ್ಷ ಸ್ಥಾನ ತಮಗೆ ಒಪ್ಪಿಗೆ ಇಲ್ಲ ಎಂದು ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂದು ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರು ನಗರಕ್ಕೆ ಆಗಮಿಸಲಿದ್ದು, ಭಿನ್ನಮತ ಶಮನಗೊಳಿಸುವ ಪ್ರಯತ್ನ ನಡೆಸಲಿದ್ದಾರೆ.ಅಲ್ಲದೆ, ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವವರಿಗೆ ಖಾತೆ ಹಂಚಿಕೆ ಬಗ್ಗೆ ಚರ್ಚೆ ಕೂಡ ಮಾಡಲಿದ್ದಾರೆ.ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ವಿಜಯಪುರದಲ್ಲಿ ನಡೆಯಲಿರುವ ತೋಟಗಾರಿಕೆ ಸಮ್ಮೇಳನಕ್ಕೆ ತೆರಳಲಿದ್ದು, ನಾಳೆ ಸಂಜೆ ಹಿಂದಿರುಗಲಿದ್ದಾರೆ.

ಹೀಗಾಗಿ ಖಾತೆ ಹಂಚಿಕೆ ಇನ್ನೆರಡು ದಿನಗಳ ನಂತರವೇ ನಡೆಯುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಈ ಹಗ್ಗ-ಜಗ್ಗಾಟ ಮುಂದುವರಿಯಲಿದೆ.

ಖಾತೆಗಾಗಿ ಕ್ಯಾತೆ: ಈ ನಡುವೆ ಸಂಪುಟಕ್ಕೆ ಸೇರ್ಪಡೆಯಾದವರು ತಮಗೆ ಪ್ರಮುಖ ಖಾತೆಗಳನ್ನು ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.ಉತ್ತರ ಕರ್ನಾಟಕದ ಏಳು ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ.ನಮ್ಮ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದು ಬೇಡ. ನಮಗೆ ಪ್ರಮುಖ ಖಾತೆಗಳನ್ನು ನೀಡಬೇಕು ಎಂದು ಹೈಕಮಾಂಡ್ ನಾಯಕರ ಮೇಲೆ ಒತ್ತಡ ತಂದಿದ್ದಾರೆ.

ಎಂ.ಬಿ.ಪಾಟೀಲ್ ಅವರು ನನಗೆ ಜಲಸಂಪನ್ಮೂಲ ಖಾತೆ ನೀಡಬೇಕೆಂದು ಆಗ್ರಹಿಸಿದರೆ, ಹಲವು ಹಿರಿಯ ಶಾಸಕರು ಖಾತೆ ಬದಲಾವಣೆಗೆ ಒತ್ತಾಯಿಸಿದ್ದಾರೆ. ಕೈಗಾರಿಕೆ ಬಗ್ಗೆ ಹೆಚ್ಚು ಮಾಹಿತಿ ಇದೆ. ನನಗೆ ಬೃಹತ್ ಕೈಗಾರಿಕೆ ಖಾತೆ ನೀಡಬೇಕೆಂದು ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಡಾ.ಜಿ.ಪರಮೇಶ್ವರ್ ಅವರು ತಮ್ಮ ಬಳಿ ಇರುವ ಹೆಚ್ಚುವರಿ ಯುವಜನ ಸೇವಾ ಕ್ರೀಡಾ ಇಲಾಖೆಯನ್ನು ಮಾತ್ರ ಬಿಟ್ಟುಕೊಡಲು ಒಪ್ಪಿದ್ದಾರೆ.

ಅದೇ ರೀತಿ ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಖಾತೆ ಬಿಟ್ಟುಕೊಡುವುದಾದರೆ ಆರ್‍ಡಿಪಿಆರ್ ಖಾತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.ಜಾರ್ಜ್ ಅವರು ತಮ್ಮ ಬಳಿ ಇರುವ ಹೆಚ್ಚುವರಿ ಸಕ್ಕರೆ ಖಾತೆಯನ್ನು ಬಿಟ್ಟುಕೊಡಲಿದ್ದು, ಬೆಂಗಳೂರು ನಗರಾಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದಾರೆ.

ಒಟ್ಟಾರೆ ಸಂಪುಟ ವಿಸ್ತರಣೆ ಭಿನ್ನಮತದ ಬೇಗೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಖಾತೆ ಹಂಚಿಕೆ ಕಗ್ಗಂಟು ಕೂಡ ಬಿಗಿಯಾಗಿದೆ.ಪಕ್ಷದ ವರಿಷ್ಠರು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ