ಬೆಂಗಳೂರು, ಡಿ.24-ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜನವರಿ 15ರಿಂದ ಪ್ರಾರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಗೋವಾ ರಾಜ್ಯದ ಲೋಕೋಪಯೋಗಿ ಸಚಿವ ಆರ್.ಎನ್.ದಾವನ್ಕರ್ ಅವರೊಂದಿಗೆ ಉಭಯರಾಜ್ಯಗಳ ನಡುವಿನ ಗಡಿ ಭಾಗದ ಕೆಲವೊಂದು ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಪ್ರತಿ 20 ಕಿಲೋಮೀಟರ್ಗೊಂದರಂತೆ 11 ಕ್ಯಾಂಪ್ಗಳನ್ನು ಹಾಕಲಾಗುತ್ತದೆ.ಈಗಾಗಲೇ ಬೈಪಾಸ್ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.ರಸ್ತೆ ನಿರ್ಮಿಸಲು 30 ತಿಂಗಳ ಕಾಲಾವಕಾಶವಿದ್ದು, ಗುತ್ತಿಗೆದಾರರು 24 ತಿಂಗಳಲ್ಲೇ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.ರಸ್ತೆ ನಿರ್ಮಾಣಕ್ಕೆ 540 ಕೋಟಿ ರೂ.ವೆಚ್ಚವಾಗಲಿದೆ ಎಂದು ಹೇಳಿದರು.
ಮೊದಲ ಹಂತದ ಪ್ಯಾಕೇಜ್ಗೆ 3451 ಕೋಟಿ ರೂ.ಎರಡನೇ ಹಂತದ ಪ್ಯಾಕೇಜ್ಗೆ 3 ಸಾವಿರ ಕೋಟಿ ರೂ.ವೆಚ್ಚವಾಗಲಿದೆ.5 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ಕೋರಲಾಗಿದೆ ಎಂದು ಹೇಳಿದರು.
ಗೋವಾ-ಕರ್ನಾಟಕದ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ನಿರ್ಮಿಸಲಾಗುತ್ತಿದೆ. ಹೀಗಾಗಿ ಪರ್ಯಾಯ ಮಾರ್ಗಗಳಲ್ಲಿ ಉಭಯ ರಾಜ್ಯಗಳ ನಡುವೆ ಸಂಚಾರಕ್ಕೆ ಅವಕಾಶಕಲ್ಪಿಸುವ ಸಂಬಂಧ ಗೋವಾ ರಾಜ್ಯದ ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಲಾಗಿದೆ. ವಾರಾಂತ್ಯದಲ್ಲಿ ಬೆಳಗಾವಿ -ಹುಬ್ಬಳ್ಳಿಯಿಂದ ಗೋವಾಕ್ಕೆ ಸುಮಾರು 3 ಸಾವಿರ ವಾಹನಗಳು ಸಂಚರಿಸಲಿವೆ.
ಬೆಳಗ್ಗೆ 6 ರಿಂದ ಸಂಜೆರವರೆಗೆ ವಾಹನ ಸಂಚಾರಕ್ಕೆ ಅವಕಾಶವಿದೆ. ಸಂಜೆ 6 ರಿಂದ ರಾತ್ರಿ 9ರವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂಬುದು ಗೋವಾ ರಾಜ್ಯದ ಬೇಡಿಕೆ ಯಾಗಿದೆ.ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಲು ಸಲಹೆ ಮಾಡಲಾಗಿದೆ.ವನ್ಯಜೀವಿಗಳಿಗೆ ಧಕ್ಕೆಯಾಗದಂತೆ ಲಘುವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಚರ್ಚಿಸಲಾಗಿದ್ದು, ಒಟ್ಟಾರೆ ಸುಪ್ರೀಂಕೋರ್ಟ್ನ ಅನುಮತಿ ಕೋರಲು ಸಲಹೆ ಮಾಡಲಾಗಿದೆ ಎಂದು ಹೇಳಿದರು.
ನಮ್ಮ ರಾಜ್ಯದ ವ್ಯಾಪ್ತಿಯಲ್ಲಿ 52 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಇದ್ದು, ಒಂದೇ ಬಾರಿಗೆ ರಸ್ತೆ ಸುಧಾರಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸುಮಾರು 30 ರಿಂದ 40 ಕೋಟಿ ರೂ.ವೆಚ್ಚವಾಗಲಿದೆ.
ಬೆಳಗಾವಿ, ಖಾನಾಪುರ, ಗೋವಾ ಮಾರ್ಗದ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆದಿದೆ. ಅರಣ್ಯ ಪಥದಲ್ಲಿ ಎರಡು ಪಥದ ರಸ್ತೆ ನಿರ್ಮಿಸಲಾಗುತ್ತಿದೆ. ಹೀಗಾಗಿ ಉಭಯ ರಾಜ್ಯಗಳ ಪ್ರವಾಸಿಗರು, ಕಬ್ಬು ಸಾಗಾಣಿಕೆಗೆ ಪರ್ಯಾಯ ರಸ್ತೆಗಳು ಸುಸ್ಥಿತಿಯಲ್ಲಿಲ್ಲ ಎಂದು ಹೇಳಿದರು.
ಖಾನಾಪುರ ಅಳ್ಳಾವರ್ ನಡುವೆ 22 ಕಿಲೋಮೀಟರ್ ರಸ್ತೆ, ತೀರನ್ವಾಡಿ ಚೋರ್ಲಾ ನಡುವೆ 58 ಕಿಲೋಮೀಟರ್, ಖಾನಾಪುರ ಜಾಂಬೋಡಿ ನಡುವೆ 12 ಕಿ.ಮೀ.ರಸ್ತೆಗಳನ್ನು ಒಳಗೊಂಡಿದೆ ಎಂದು ಹೇಳಿದರು.