ಆಂತರಿಕ ಕಚ್ಚಾಟದಿಂದ ಮೈತ್ರಿ ಸರ್ಕಾರ ಪತನವಾದರೆ, ಸರ್ಕಾರ ರಚನೆ ಮಾಡುವಲ್ಲಿ ಎಚ್ಚರಿಕೆ ಹೆಜ್ಜೆ ಇಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

ಬೆಂಗಳೂರು, ಡಿ.24- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರ ಆಂತರಿಕ ಕಚ್ಚಾಟದಿಂದಲೇ ಪತನವಾಗುವ ಹಂತಕ್ಕೆ ಬಂದರೆ ಸರ್ಕಾರ ರಚನೆ ಮಾಡುವ ಅವಕಾಶವನ್ನು ಕಳೆದುಕೊಳ್ಳದೆ ಎಚ್ಚರಿಕೆ ಹೆಜ್ಜೆ ಇಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.

ಶಾಸಕರು ರಾಜೀನಾಮೆ ನೀಡಿದ ನಂತರ ಅಖಾಡಕ್ಕೆ ಇಳಿಯುವಂತೆ ಹೇಳಿದ್ದಾರೆ.

ನೇರವಾಗಿ ಆಪರೇಷನ್ ನಡೆಸಿದರೆ ಪಕ್ಷಕ್ಕೆ ಹಾನಿಯುಂಟಾಗಬಹುದೆಂಬ ಕಾರಣಕ್ಕಾಗಿ ಕೇಂದ್ರ ಬಿಜೆಪಿ ನಾಯಕರು ಈ ಬಾರಿ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉಸ್ತುವಾರಿ ಮುರಳೀಧರರಾವ್‍ಗೆ ಇದರ ಜವಾಬ್ದಾರಿ ನೀಡಲಾಗಿದ್ದು, ಸರ್ಕಾರ ರಚನೆ ಮಾಡುವ ಸಂಬಂಧ ಮಾಧ್ಯಮಗಳಿಗೆ ಶಾಸಕರಾಗಲಿ, ಪಕ್ಷದ ವಕ್ತಾರರಾಗಲಿ, ಇನ್ಯಾವುದೇ ಮುಖಂಡರು ಏನೊಂದೂ ಹೇಳಿಕೆ ನೀಡಬಾರದು ಎಂದು ಕಟ್ಟಪ್ಪಣೆ ಮಾಡಲಾಗಿದೆ.
ಪಕ್ಷದಲ್ಲಿನ ಆಂತರಿಕ ಬೆಳೆವಣಿಗೆಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿರುವುದರಿಂದ ನಮ್ಮೆಲ್ಲಾ ಯೋಜನೆಗಳು ವಿಫಲವಾಗುತ್ತಿವೆ. ಈ ಬಾರಿ ಅತ್ಯಂತ ಜಾಗರೂಕತೆಯಿಂದ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಸೂಚಿಸಲಾಗಿದೆ.

ಮೊದಲು ಎಷ್ಟು ಸಂಖ್ಯೆ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬುದನ್ನು ತಿಳಿದುಕೊಂಡು ನಂತರ ಮುಂದುವರಿಯಿರಿ, ಆತುರಾತುರವಾಗಿ ಬಹಿರಂಗ ಹೇಳಿಕೆ ನೀಡುವುದರಿಂದ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತವೆ. ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದುಎಂದು ವರಿಷ್ಟರು ಸೂಚನೆ ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ಸಚಿವ ಸಂಪುಟ ಪುನಾರಚನೆಯಾದ ಬಳಿಕ ಬಿಜೆಪಿಯ ಯಾವುದೇ ನಾಯಕರು ಬಹಿರಂಗ ಹೇಳಿಕೆ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ.ಈ ಹಿಂದೆ ಪಕ್ಷದೊಳಗಿರುವವರೇ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರಿಂದ ಎಲ್ಲಾ ಯೋಜನೆಗಳು ವಿಫಲವಾಗಿದ್ದವು, ಹೀಗಾಗಿ ಯಡಿಯೂರಪ್ಪ ಹೊರತು ಪಡಿಸಿ ಯಾರೊಬ್ಬರೂ ತುಟಿಕ್‍ಪಿಟಿಕ್ ಎನ್ನುತ್ತಿಲ್ಲ.

ಈ ಹಿಂದೆ ಬಿಜೆಪಿಯ ಮುಖಂಡರಾದ ಶ್ರೀರಾಮುಲು, ಈಶ್ವರಪ್ಪ, ಆರ್.ಅಶೋಕ್, ರೇಣುಕಾಚಾರ್ಯ ಸೇರಿದಂತೆ ಎಲ್ಲರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರಿಂದ ಕಮಲ ಪಕ್ಷದ ಯಾವುದೇ ಯೋಜನೆಗಳು ಯಶಸ್ವಿಯಾಗಿರಲಿಲ್ಲ. ಎಲ್ಲವೂ ಕೈ ಕೊಟ್ಟಿದ್ದರಿಂದ ಎಚ್ಚೆತ್ತುಕೊಂಡಿರುವ ನಾಯಕರು ಹಾದಿಬೀದಿಯಲ್ಲಿ ಮಾತನಾಡುವವರ ಬಾಯಿಗೆ ಬೀಗ ಹಾಕಿದ್ದಾರೆ.

ಸಂಪರ್ಕದಲ್ಲಿರುವ ರಮೇಶ್ ಜಾರಕಿಹೊಳಿ:
ಇನ್ನು ಸಚಿವ ಸ್ಥಾನ ಕಳೆದುಕೊಂಡು ಸಿಡಿದೆದ್ದಿರುವ ರಮೇಶ್ ಜಾರಕಿಹೊಳಿ ಜತೆ ಯಡಿಯೂರಪ್ಪ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.ರಮೇಶ್ ಜಾರಕಿಹೊಳಿ ಜತೆ ಶಾಸಕರಾದ ಮಹಂತೇಶ್ ಕೌಜಲಗಿ, ಮಹಂತೇಶ್ ಕುಮುಟಹಳ್ಳಿ, ಬಳ್ಳಾರಿಯ ಆನಂದ್‍ಸಿಂಗ್, ನಾಗೇಂದ್ರ, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್ ಸೇರಿದಂತೆ ಸುಮಾರು 8ರಿಂದ 10 ಶಾಸಕರು ಯಡಿಯೂರಪ್ಪ ಅವರ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ.

ಕೇವಲ 10 ಶಾಸಕರಿಂದ ರಾಜೀನಾಮೆ ಕೊಡಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಕನಿಷ್ಠ ಪಕ್ಷ 15 ಶಾಸಕರನ್ನಾದರೂ ಕರೆತರುವ ಯೋಜನೆ ಬಿಜೆಪಿಯದ್ದು, ಇಂದು ರಮೇಶ್ ಜಾರಕಿಹೊಳಿ ಅತೃಪ್ತ ಶಾಸಕರ ಜತೆ ಸಭೆ ನಡೆಸಲಿದ್ದು, ನಂತರವೇ ಬಿಜೆಪಿಯ ಚಿತ್ರಣ ಹೊರ ಬೀಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ