ಬೆಂಗಳೂರು, ಡಿ.24- ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ನೆರೆರಾಜ್ಯ ತಮಿಳುನಾಡು ಸರ್ಕಾರ ತಕರಾರು ಮಾಡುತ್ತಿರುವುದನ್ನು ಖಂಡಿಸಿ ರಾಜ್ಯದ ಸರ್ವಪಕ್ಷಗಳ ಸಂಸದರು ಇದೇ 27 ರಂದು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ನಡೆಸುತ್ತಿರುವ ಪ್ರತಿಭಟನೆಗೆ ಜಯ ಕರ್ನಾಟಕ ಸಂಘಟನೆಯ ಸಂಪೂರ್ಣ ಬೆಂಬಲ ಇದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಪ್ರತಿಭಟನೆಗೆ ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ, ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಹಾಗೂ ಅಂದು ನಗರದ ಟೌನ್ಹಾಲ್ ಮುಂಭಾಗ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಉತ್ತರ ಕರ್ನಾಟಕದ ಜನರಿಗೆ ನೀರಿನ ಅಭಾವ ತೀವ್ರವಾಗಿದೆ. ಅಣೆಕಟ್ಟು ಕಟ್ಟುವುದರಿಂದ ಅಲ್ಲಿನ ಸುತ್ತಮುತ್ತಲ ಜನರಿಗೆ ನೀರಿನ ಅನುಕೂಲವಾಗಲಿದ್ದು, ವಿದ್ಯುತ್ ಸಹ ಪಡೆಯಬಹುದಾಗಿದೆ. ಉಳಿದ ನೀರನ್ನು ತಮಿಳುನಾಡಿಗೆ ಹರಿಸಲಿದ್ದೇವೆ. ಒಂದು ವೇಳೆ ಅಣೆಕಟ್ಟು ಕಟ್ಟದೆ ಇದ್ದರೆ ನೀರು ಸಮುದ್ರದ ಪಾಲಾಗುತ್ತದೆ. ಅಣೆಕಟ್ಟು ಕಟ್ಟುವುದು ಎರಡು ರಾಜ್ಯಕ್ಕೂ ಅನುಕೂಲವಾಗಲಿದೆ.ಇದನ್ನು ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆದಷ್ಟು ಬೇಗ ಯೋಜನೆ ಕಾಮಗಾರಿಗಳನ್ನು ಕೈಗೊಳ್ಳಬೇಕು.ಈ ಮೂಲಕ ನಮ್ಮ ರಾಜ್ಯದ ಜನರ ಹಿತವನ್ನು ಕಾಪಾಡಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ಬೆಂಗಳೂರು ಜಿಲ್ಲಾಧ್ಯಕ್ಷ ಕೆ.ಎನ್.ಜಗದೀಶ್ ಸೇರಿದಂತೆ ಮತ್ತಿತರರಿದ್ದರು.