ರಾಜೀನಾಮೆ ಹೇಳಿಕೆಗೆ ನಾನು ಬದ್ಧ: ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು: ಸಚಿವ ಸಂಪುಟ ಪುನಾರಚನೆಯ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುತ್ತಾರೆ ಎಂದು ಆಪ್ತರೊಬ್ಬರು ತಿಳಿಸಿದ್ದರು. ಆದರೆ ಈ ವಿಚಾರದ ಬಗ್ಗೆ ರಮೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದೇನೆ. ನಿನ್ನೆಯೂ ರಾಜೀನಾಮೆ ಹೇಳಿಕೆ ಕೊಟ್ಟಿದ್ದೆ. ಆದ್ದರಿಂದ ನಾನು ಹೇಳಿದ್ದ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ವೇಣುಗೋಪಾಲ್ ಭೇಟಿ ಮಾಡಿಲ್ಲ. ನನಗೆ ನಾಲ್ಕು ದಿನ ಸಮಯ ಬೇಕು. ಬಳಿಕ ರಾಜೀನಾಮೆ ಕೊಡುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಕಳೆದ ಒಂದು ವಾರದಲ್ಲಿ ಮಾಧ್ಯಮಗಳು ಹೀರೋನ ವಿಲನ್ ಮಾಡಿದ್ದಾರೆ. ವಿಲನ್ ನ ಹೀರೋ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡಲಾಗುತ್ತಿದೆ. ನಾನು ನಿಮ್ಮ ಜೊತೆ ಬಹಳಷ್ಟು ಮಾತನಾಡಬೇಕು. ಸಮಯ ಬೇಕು ಎಂದು ಮತ್ತೆ ಮಾಧ್ಯಮಗಳ ಮೇಲೆ ರಮೇಶ್ ಕಿಡಿಕಾರಿದ್ದಾರೆ.

ನನ್ನ ಜೊತೆ ಎಷ್ಟು ಶಾಸಕರಿದ್ದಾರೆ ಅಂತ ನಿಮಗೆ ಯಾಕೆ ಹೇಳಬೇಕು? ಮುಂದಿನ ದಿನಗಳಲ್ಲಿ ಎಲ್ಲ ಬಹಿರಂಗಪಡಿಸುತ್ತೇನೆ. ಹೈಕಮಾಂಡ್ ನೂ ಭೇಟಿ ಮಾಡಲ್ಲ, ಯಾರನ್ನೂ ಭೇಟಿ ಮಾಡಲ್ಲ ಎಂದ್ರು. ಇನ್ನೂ ಬಿಜೆಪಿಗೆ ಹೋಗುವ ವಿಚಾರವಾಗಿ ಮಾತನಾಡಿ, ಬಿಜೆಪಿಗೆ ನೀವೇ ಹೋಗಿ ಎಂದು ಮಾಧ್ಯಮದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎರಡು ದಿನಗಳ ಹಿಂದೆ ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರವಾಗಿ ಆಪ್ತವಲಯದಲ್ಲಿ ಅಸಮಾಧಾನ ಹೊರ ಹಾಕಿದ್ದ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕೆ ಬೇಕು? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ನನ್ನೊಂದಿಗೆ ಎಷ್ಟು ಮಂದಿ ಶಾಸಕರಿದ್ದಾರೆ ಅನ್ನೊಂದನ್ನು ಈಗ ಹೇಳಲ್ಲ. ಒಂದು ವಾರ ಕಾದು ನೋಡಿ, ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಬೇಕಾದರೆ ನಾಳೆಯೇ ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ