ರೋಹ್ಟಕ್-ರೇವಾರಿ ಹೆದ್ದಾರಿಯಲ್ಲಿ 50 ವಾಹನಗಳ ಘರ್ಷಣೆ; 8 ಮಂದಿ ಸಾವು

ರೋಹ್ಟಕ್ದಟ್ಟವಾಗಿ ಆವರಿದ ಮಂಜಿನಿಂದಾಗಿ ಮುಂದೆ ಚಲಿಸುತ್ತಿರುವ ವಾಹನಗಳು ಕಾಣದ ಕಾರಣ ಹರಿಯಾಣದ ರೋಹ್ಟಕ್-ರೇವಾರಿ ಹೆದ್ದಾರಿಯಲ್ಲಿ ಸಾಗುತ್ತಿದ್ದ 50ಕ್ಕೂ ಹೆಚ್ಚು ವಾಹನಗಳು ಒಂದರ ಹಿಂದೊಂದರಂತೆ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಧಾರುಣ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಟ್ರಕ್ಕುಗಳು, ಕಾರುಗಳ ನಡುವೆ ಘರ್ಷಣೆಯಾಗಿದ್ದು, ವಾಹನಗಳ ಅತಿಯಾದ ವೇಗ ಮತ್ತು ದಟ್ಟವಾದ ಮಂಜಿನಿಂದಾಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಹೆದ್ದಾರಿಯುದ್ದಕ್ಕೂ ಜಖಂಗೊಂಡ ವಾಹನಗಳ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಈ ಅವಘಡದಲ್ಲಿ ಮೃತಪಟ್ಟ ಎಲ್ಲರೂ ಒಂದೇ ಕುಟುಂಬದವರಾಗಿದ್ದು, ಯಾವುದೋ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಮೃತರಾದ 8 ಜನರಲ್ಲಿ ಆರು ಮಹಿಳೆಯರಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ನಜ್ಜುಗುಜ್ಜಾದ ವಾಹನಗಳ ತೆರವು ಕಾರ್ಯಾಚರಣೆಯೂ ಭರದಿಂದ ಸಾಗಿದ್ದು, ಸುಮಾರು 2 ಕಿ.ಮೀ. ವರೆಗೆ ಟ್ರಾಫಿಕ್​ ಜಾಮ್ ಉಂಟಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ