ಬೆಂಗಳೂರು,ಡಿ.24- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ವೇದಿಕೆ ಶಂಕರಮಠದ ನೇತಾಜಿ ಸುಭಾಶ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿಯ ಅಂತಿಮ ಹಣಾಹಣಿ ನಾಳೆ ನಡೆಯಲಿದೆ.
ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿರುವ ರಾಷ್ಟ್ರಮಟ್ಟದ ತಂಡಗಳು ವಾಜಪೇಯಿ ಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ರೋಚಕ ಹಣಾಹಣಿ ಮೂಲಕ ಕ್ರೀಡಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಇಂದು ಸಂಜೆ ಸೆಮಿ ಫೈನಲ್ ನಡೆಯಲಿದ್ದು, ಫೈನಲ್ ತಲುಪುವ ತಂಡಗಳ ಆಯ್ಕೆಯಾಗಲಿದೆ.ನಾಳೆ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಗೆಲುವು ಸಾಧಿಸುವ ತಂಡಕ್ಕೆ ವಾಜಪೇಯಿ ಕಪ್ ಒಲಿಯಲಿದೆ.
ನಿನ್ನೆ ನಡೆದ ಕ್ವಾರ್ಟರ್ ಫೈನಲ್ನ ಮಹಿಳಾ ವಿಭಾಗದ ಪಂದ್ಯಾವಳಿಯಲ್ಲಿ ಸಾಯಿ ಮತ್ತು ಕೆವಿಎ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೆವಿಎ ಗೆಲುವು ಸಾಧಿಸಿತು.
ಕೆವಿಎ ತಂಡದ ನಿರುಪಮಾ, ಪೂಜಾ, ಪವಿತ್ರ ಹಾಗೂ ಸಾಯಿ ತಂಡದ ಮೇಘನಾ ಅವರು, ಉತ್ತಮ ಆಟ ಪ್ರದರ್ಶಿಸಿದರು.
ಪುರುಷ ಪಂದ್ಯಾವಳಿಯಲ್ಲಿ ಪೋಸ್ಟಲ್ ಮತ್ತು ಬಿಎಸ್ಎನ್ಎಲ್ ನಡುವೆ ಪಂದ್ಯದಲ್ಲಿ ಪೋಸ್ಟಲ್ ತಂಡ ಗೆಲುವು ಸಾಧಿಸಿತು.ಇದೇ ರೀತಿ ಎಎಸ್ಸಿ ಮತ್ತು ಮಂಗಳೂರು ನಡುವಿನ ಪಂದ್ಯದಲ್ಲಿ ಎಎಸ್ಸಿ ತಂಡ ಭರ್ಜರಿ ಗೆಲುವು ಸಾಧಿಸಿತು.
ಸಿಕ್ವೆಲ್ ಮತ್ತು ಜೆಎಸ್ ಡಬ್ಲ್ಯೂ ನಡುವೆ ನಡೆದ ಪಂದ್ಯದಲ್ಲಿ ಜೆಎಸ್ ಡಬ್ಲ್ಯೂ ಗೆಲುವಿನ ನಗೆ ಬೀರಿತು.
ಕೆವಿಎ ಮತ್ತು ಎಸ್ಡಿಎಂ ಉಜಿರೆ ತಂಡದ ನಡುವಿನ ಮಹಿಳಾ ಪಂದ್ಯದಲ್ಲಿ ಉಜಿರೆ ಗೆಲುವು ಸಾಧಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು.
ಪೈನಲ್ನಲ್ಲಿ ಗೆಲುವು ಸಾಧಿಸಿ ವಾಜಪೇಯಿ ಕಪ್ ಗೆದ್ದು ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 60 ಸಾವಿರ, ದ್ವಿತೀಯ ಸ್ಥಾನಕ್ಕೆ 40, ತೃತೀಯ ಸ್ಥಾನಕ್ಕೆ 20 ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಮಾಜಿ ಉಪಮೇಯರ್ ಎಸ್.ಹರೀಶ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಗೆಲ್ಲುವ ತಂಡಗಳಿಗೆ ಪ್ರಶಸ್ತಿ ವಿತರಿಸಲಿದ್ದಾರೆ.