ಬೆಂಗಳೂರು, ಡಿ.23-ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಒಂದೊಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗಳು ಹೊರಬರುತ್ತಿವೆ. ಸಚಿವ ಸ್ಥಾನ ವಂಚಿತ ಶಾಸಕರು ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅನುಭವ, ಹಿರಿತನಕ್ಕೆ ಬೆಲೆ ಕೊಟ್ಟಿಲ್ಲ. ತಮಗೆ ಬೇಕಾದವರಿಗೆ ಸಚಿವ ಸ್ಥಾನ ನೀಡಲಾಗಿದೆ. ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ.
ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸುವ ಯತ್ನ ಒಂದೆಡೆ ನಡೆಯುತ್ತಿದೆ. ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಸೇರಿದಂತೆ ಹಲವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಈ ನಾಲ್ವರು ಸೇರಿ ಸಂಪುಟ ವಿಸ್ತರಣೆ ಮಾಡಿದ್ದಾರೆ.ಅನುಭವ, ಹಿರಿತನಕ್ಕೆ ಮಾನ್ಯತೆ ನೀಡುತ್ತಾರೆ ಎಂದು ತಿಳಿದುಕೊಂಡಿದ್ದೆ. ಆದರೆ ಕೊಟ್ಟಿಲ್ಲ. ಸಚಿವ ಸ್ಥಾನ ಪಡೆಯಲು ನಾನು ಯಾವ ರೀತಿ ಲಾಬಿ ಮಾಡಿಲ್ಲ. ಕೈ ತಪ್ಪಿದೆ ಎಂದು ಕೂಡ ಯಾವ ಲಾಬಿಯನ್ನೂ ಮಾಡಿಲ್ಲ. ಅಸಮಾಧಾನ ಇರುವುದು ನಿಜ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸಂಪುಟದಿಂದ ಹೊರಹಾಕಲ್ಪಟ್ಟ ರಮೇಶ್ ಜಾರಕಿ ಹೊಳಿ ಅವರು ಕೂಡ ಮುನಿಸಿಕೊಂಡಿದ್ದಾರೆ.ಇವರು ಪಕ್ಷದ ವಿರುದ್ಧವಾಗಲಿ, ನಾಯಕರ ವಿರುದ್ಧವಾಗಲಿ ಮಾತನಾಡಿಲ್ಲ. ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ. ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಪ್ರತಿಕ್ರಿಯೆ ಕೇಳಲು ತೆರಳಿದ ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವ ಅವರು, ನಿಮ್ಮಿಂದಲೇ ಈ ಪರಿಸ್ಥಿತಿ ಬಂದಿದ್ದು ಎಂದು ಕಿಡಿಕಾರಿದ್ದಾರೆ. ಇನ್ನು ಹಲವರು ತಮ್ಮ ಅಸಮಾಧಾನವನ್ನು ಹೊರಹಾಕಲಾಗದೆ ಒಳಗೇ ಕುದಿಯುತ್ತಿದ್ದಾರೆ.
ಅವಕಾಶವಿದ್ದರೂ ಅಧಿಕಾರ ಸಿಗುತ್ತಿಲ್ಲ ಎಂದು ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ಮತ್ತೊಂದೆಡೆ ಅತೃಪ್ತರನ್ನು ಸಮಾಧಾನಗೊಳಿಸುವ ಯತ್ನವನ್ನು ಮಾಡಲಾಗುತ್ತಿದೆ. ಎರಡು ವರ್ಷದ ನಂತರ ಮತ್ತೆ ಅವಕಾಶ ನೀಡಲಾಗುವುದು. ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಅತೃಪ್ತರಿಗೆ ನಾಯಕರು ಭರವಸೆ ನೀಡಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ನಿವಾಸದಲ್ಲಿ ಅತೃಪ್ತರನ್ನು ಸಮಾಧಾನಪಡಿಸುವ ಯತ್ನ ನಡೆದಿದೆ. 80 ಕಾಂಗ್ರೆಸ್ ಶಾಸಕರ ಪೈಕಿ ಸಂಪುಟದಲ್ಲಿರುವ 19 ಸಚಿವರು, 20 ನಿಗಮ ಮಂಡಳಿಗಳ ಅಧ್ಯಕ್ಷರು, 10 ಸಂಸದೀಯ ಕಾರ್ಯದರ್ಶಿಗಳು, ದೆಹಲಿ ವಿಶೇಷ ಪ್ರತಿನಿಧಿ, ರಾಜಕೀಯ ಕಾರ್ಯದರ್ಶಿ ಸೇರಿದಂತೆ 60 ಶಾಸಕರಿಗೆ ವಿವಿಧ ಅಧಿಕಾರವನ್ನು ನೀಡಲಾಗಿದೆ.
ನಿಗಮ ಮಂಡಳಿಯಲ್ಲಿ ಹಲವು ಶಾಸಕರು ಹುದ್ದೆಯನ್ನು ನಿರಾಕರಿಸಿದ್ದು, ಅವರ ಮನವೊಲಿಸುವ ಯತ್ನವನ್ನೂ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಉತ್ತಮ ಅಧಿಕಾರ ನೀಡುವ ಭರವಸೆಯನ್ನೂ ನೀಡುತ್ತಿದ್ದಾರೆ.ಒಂದೆಡೆ ಅಸಮಾಧಾನಿತರು ಸಭೆ ಸೇರಿ ಚರ್ಚಿಸಿ ಹೈಕಮಾಂಡ್ಗೆ ದೂರು ನೀಡಲು ನಿರ್ಧರಿಸಿದ್ದಾರೆ. ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ನೀಡುವಲ್ಲಿ ನಮಗೆ ಅನ್ಯಾಯವಾಗಿದೆ. ಪಕ್ಷನಿಷ್ಠರನ್ನು, ಹಿರಿಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.ಎಲ್ಲವನ್ನು ಹೈಕಮಾಂಡ್ ಗಮನಕ್ಕೆ ತರಲು ಅತೃಪ್ತರು ನಿರ್ಧರಿಸಿದ್ದಾರೆ.ಮುಂದೆ ಏನಾಗುವುದೋ ಕಾದು ನೋಡಬೇಕು.