ಕಾದು ನೋಡುವ ತಂತ್ರಕ್ಕೆ ಶರಣಾದ ಬಿಜೆಪಿ

ಬೆಂಗಳೂರು, ಡಿ.23-ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಭಿನ್ನಮತೀಯರ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

ನಿನ್ನೆಯಿಂದ ಬಿಜೆಪಿಯ ಯಾವೊಬ್ಬ ನಾಯಕರು ಬಹಿರಂಗವಾಗಿ ಸಮ್ಮಿಶ್ರ ಸರ್ಕಾರದ ಆಂತರಿಕ ಬೆಳವಣಿಗೆಗಳ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿರುವುದು ನಾನಾ ಸಂಶಯಗಳನ್ನು ಹುಟ್ಟು ಹಾಕಿದೆ.

ಯಾವುದೇ ಕಾರಣಕ್ಕೂ ಪಕ್ಷದ ವಕ್ತಾರರಾಗಲಿ, ಇಲ್ಲವೆ ಪ್ರಮುಖರು ಎರಡೂ ಪಕ್ಷಗಳ ಆಂತರಿಕ ವಿಚಾರಗಳ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ಸೂಚಿಸಿರುವುದರಿಂದ ಬಿಜೆಪಿಯ ನಡೆ ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಸಚಿವ ಸಂಪುಟ ವಿಸ್ತರಣೆಗೆ ಮುನ್ನ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತ್ರ ಹೇಳಿಕೆ ನೀಡಿದ್ದನ್ನು ಹೊರತುಪಡಿಸಿದರೆ ತದನಂತರ ಎಲ್ಲಾ ನಾಯಕರ ಬಾಯಿ ಬಂದ್ ಆಗಿದೆ.

ಈ ಹಿಂದೆ ಮೊದಲ ಹಂತದ ನಾಯಕರಿಂದ ಹಿಡಿದು ಕೊನೆಯವರೆಗಿನ ನಾಯಕರು ಕೂಡ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರು.ಪರಿಣಾಮ ಬಿಜೆಪಿ ನಾಯಕರು ಏನು ಮಾಡಬೇಕೆಂದು ಅಂದುಕೊಂಡಿದ್ದರೋ ಎಲ್ಲವೂ ತಿರುಗುಬಾಣವಾಗುತ್ತಿತ್ತು.

ಇದೀಗ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಕಮಲ ಪಡೆ ಕಾಂಗ್ರೆಸ್ ಜೆಡಿಎಸ್ ದೋಸ್ತಿಯಲ್ಲಿನ ಆಂತರಿಕ ವಿಚಾರಗಳ ಬಗ್ಗೆ, ಇಲ್ಲವೆ ಬಿಜೆಪಿಯೊಳಗಿನ ಯಾವುದೇ ವಿದ್ಯಮಾನಗಳನ್ನು ಬಹಿರಂಗಗೊಳಿಸದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹೀಗಾಗಿ ನಿನ್ನೆಯಿಂದ ಕಾಂಗ್ರೆಸ್‍ನಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದರೂ ಯಾವ ನಾಯಕರೂ ಪ್ರತಿಕ್ರಿಯೆ ನೀಡದಿರುವುದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಿದೆ.ಹಿಂದೆ ಸರ್ಕಾರ ಇಂದು ಪತನವಾಗಲಿದೆ, ನಾಳೆ ಪತನವಾಗಲಿದೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ, ಸರ್ಕಾರ ಇಂತಹ ದಿನವೇ ಬಿದ್ದುಹೋಗಲಿದೆ ಎಂದು ಭವಿಷ್ಯ ನುಡಿದಿದ್ದರಿಂದ ಎಲ್ಲಾ ಆಪರೇಷನ್‍ಗಳು ಕೈಕೊಟ್ಟಿದ್ದವು.

ಹೀಗೆ ಒಂದೊಂದೇ ರಣತಂತ್ರಗಳು ಕೈಕೊಟ್ಟು ಆಡಳಿತ ಪಕ್ಷದ ಎದುರು ಮುಜುಗರಕ್ಕೀಡಾಗುವಂತೆ ಮಾಡಿದ್ದವು.ಹೀಗಾಗಿ ಈ ಬಾರಿ ಬಿಜೆಪಿ ನಾಯಕರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

ಭಿನ್ನಮತೀಯರ ಜೊತೆ ಸಂಪರ್ಕ:
ಮೂಲಗಳ ಪ್ರಕಾರ ಭಿನ್ಮಮತೀಯ ಅನೇಕ ಶಾಸಕರ ಜೊತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟದಿಂದ ನಿನ್ನೆಯಷ್ಟೆ ಕೋಕ್ ಪಡೆದಿರುವ ರಮೇಶ್ ಜಾರಕಿ ಹೊಳಿ, ಆರ್.ಶಂಕರ್, ಈ ಹಿಂದೆ ತಮ್ಮ ಪಕ್ಷದಲ್ಲೇ ಇದ್ದು ಕಾಂಗ್ರೆಸ್‍ಗೆ ಹೋಗಿದ್ದ ಶಾಸಕರಾದ ಆನಂದ್‍ಸಿಂಗ್, ನಾಗೇಂದ್ರ, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಅಥಣಿಯ ಮಹೇಶ್ ಕಮಟಳ್ಳಿ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಶಾಸಕರ ಜೊತೆ ಸತತವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ತಕ್ಷಣವೇ ಈ ಎಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೂ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಬಿಜೆಪಿ ನಾಯಕರು.

ಬೆಳಗಾವಿಯ ಅಧಿವೇಶನದ ವೇಳೆ ಬಿಜೆಪಿಯ ವಿಧಾನಪರಿಷತ್ ಸಚೇತಕ ಮಹಂತೇಶ್ ಕವಟಗಿ ಮಠ ಏರ್ಪಡಿಸಿದ್ದ ಔತಣಕೂಟದಲ್ಲಿ ರಮೇಶ್ ಜಾರಕಿ ಹೊಳಿ ಭಾಗವಹಿಸಿ ಕಾಂಗ್ರೆಸ್‍ಗೆ ಮುಜುಗರ ಸೃಷ್ಟಿಸಿದ್ದರು.

ಬಿಜೆಪಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ರಮೇಶ್ ಜಾರಕಿ ಹೊಳಿ ಕಾಂಗ್ರೆಸ್ ಬಿಡುವುದಾದರೆ ಏಕಾಂಗಿಯಾಗಿ ಹೋಗುವುದಿಲ್ಲ. ಬದಲಿಗೆ ಒಂದಷ್ಟು ಬೆಂಬಲಿಗರನ್ನು ಜೊತೆಗೆ ಕರೆತರುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ ಬಿಜೆಪಿ ನಾಯಕರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕೇಂದ್ರದ ವರಿಷ್ಠರಿಗೆ ಅನಿವಾರ್ಯವಾಗಿದೆ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದರಿಂದ ಒಂದೊಂದು ರಾಜ್ಯವೂ ಕೂಡ ಪ್ರಮುಖ ಎಂಬುದು ರಾಷ್ಟ್ರೀಯ ನಾಯಕರಿಗೆ ಮನವರಿಕೆಯಾಗಿದೆ. ಹೀಗಾಗಿ ಕಾಂಗ್ರೆಸ್‍ನ ಅತೃಪ್ತ ಶಾಸಕರ ಚಲನವಲನಗಳ ಮೇಲೆ ಬಿಜೆಪಿಯವರು ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ಸಂದರ್ಭದಲ್ಲೂ ಯಾವುದೇ ರೀತಿಯ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯಬಹುದೆಂಬ ಲೆಕ್ಕಾಚಾರ ಬಿಜೆಪಿಯವರದ್ದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ