ಬೆಂಗಳೂರು, ಡಿ.22- ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಸೇರಿದಂತೆ ಎಲ್ಲ ಸಾರ್ವಜನಿಕ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.
ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ಆರ್.ಕೆ.ಸಿಪಾನಿ ಹಾಗೂ ಡಿ.ಆರ್.ಡಾಗಾ ಅವರು ನಿರ್ಮಿಸಿರುವ ಪ್ರತ್ಯೇಕ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಅತ್ಯುನ್ನತ ಆರೋಗ್ಯ ಸೌಲಭ್ಯ ಸಿಗುತ್ತಿರುವುದು ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದಿಂದ 120 ಕೋಟಿ ರೂ.ಗಳು ಆರೋಗ್ಯ ಸೇವೆಗಾಗಿ ಅನುದಾನ ದೊರೆತಿದೆ. ಇದರೊಂದಿಗೆ ಕಿದ್ವಾಯಿ ಮತ್ತಿತರ ಆಸ್ಪತ್ರೆಗಳಲ್ಲಿ ಇನ್ಫೋಸಿಸ್ ಸೇರಿದಂತೆ ವಿವಿಧ ಸಂಸ್ಥೆ ಹಾಗೂ ವ್ಯಕ್ತಿಗಳು ನೆರವು ನೀಡಿ ಉತ್ತಮ ಸೌಲಭ್ಯ ಕಲ್ಪಿಸಿದ್ದಾರೆ ಎಂದು ವಿವರಿಸಿದರು.
ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಬಿಇಎಲ್ ಸಂಸ್ಥೆ ಕ್ಯಾನ್ಸರ್ ಪತ್ತೆಗೆ ಮೊಬೈಲ್ ವಾಹನ ನೀಡಿದೆ. ಈ ರೀತಿ ಅನುಕೂಲಕರವಾದ ಮೊಬೈಲ್ ವಾಹನವನ್ನು ಆರೋಗ್ಯ ಇಲಾಖೆಯು ವ್ಯವಸ್ಥೆ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.
ಸರ್ಕಾರ ಅಂಗಾಂಗ ಕಸಿಗೆ 30 ಕೋಟಿ ಮೀಸಲಿಟ್ಟಿದೆ ಎಂದ ಅವರು, ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಮಾಡಲು ಮುಂದೆ ಬರುವ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಸರ್ಕಾರ ಬೆಂಬಲ ನೀಡುತ್ತದೆ. ಸಿಪಾನಿ ಹಾಗೂ ಡಾಗಾ ಅವರು ಒಂದು ಸಾವಿರ ವೃದ್ಧರಿಗೆ ಸೌಲಭ್ಯ ಕಲ್ಪಿಸಲು ವೃದ್ಧಾಶ್ರಮ ನಿರ್ಮಿಸಲು ಸ್ಥಳಾವಕಾಶದ ಅಭಾವವನ್ನು ಹೇಳಿದ್ದಾರೆ. ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ದುಡ್ಡು ಕೊಟ್ಟು ಏನು ಬೇಕಾದರೂ ಕೊಂಡುಕೊಳ್ಳಬಹುದು ಎಂದು ಭಾವಿಸುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ ಎಂದ ಅವರು, ಕಿದ್ವಾಯಿ ಆಸ್ಪತ್ರೆಯಲ್ಲಿ ಹೆಚ್ಚಿನ 400 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲು ದಾನಿಗಳು ಮುಂದಿದ್ದಾರೆ. ಆದರೆ, ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಅದು ಸಾಧ್ಯವಾಗುತ್ತಿಲ್ಲ. ಮುಂದಿನ 10 ದಿನಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಗರದ ಅಭಿವೃದ್ಧಿಗೂ ನಾವು ಬದ್ಧರಾಗಿದ್ದೇವೆ. ಕಳೆದ ಆರು ತಿಂಗಳಲ್ಲಿ ಬಡವರ ಆರೋಗ್ಯಕ್ಕಾಗಿ 28 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕ್ಯಾನ್ಸರ್ ಕುರಿತ ತಂಬಾಕು ತರವಲ್ಲ ನೂತನ ವೆಬ್ಸೈಟ್ಗೆ ಚಾಲನೆ ನೀಡಲಾಯಿತು. ಡಾ.ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.