ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ ಹೆಚ್ಚಿನ ಪ್ರಾತಿನಿಧ್ಯ

ಬೆಂಗಳೂರು, ಡಿ.22- ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಸಮಪಾಲು ದೊರೆತಿದೆ. ಹೊಸದಾಗಿ ಸಂಪುಟ ಸೇರುತ್ತಿರುವ ಎಂಟು ಜನರ ಪೈಕಿ ಏಳು ಮಂದಿ ಉತ್ತರ ಕರ್ನಾಟಕ ಭಾಗದವರೇ ಆಗಿರುವುದು ವಿಶೇಷವಾಗಿದೆ.

ಸಂಪುಟ ವಿಸ್ತರಣೆ, ಪುನಾರಚನೆ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ಅನ್ಯಾಯವಾಗಿದೆ, ತಾರತಮ್ಯ ಮಾಡಲಾಗುತ್ತಿದೆ ಎಂಬ ಪ್ರಬಲ ಆರೋಪವನ್ನು ಸರಿದೂಗಿಸಲು ಕಾಂಗ್ರೆಸ್ ಪಕ್ಷ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ.

ಸಿ.ಎಸ್.ಶಿವಳ್ಳಿ ಧಾರವಾಡ ಜಿಲ್ಲೆ, ಕುಂದಗೋಳದವರು. ತುಕಾರಾಂ ಮತ್ತು ಪರಮೇಶ್ವರ್ ನಾಯಕ್ ಬಳ್ಳಾರಿ ಜಿಲ್ಲೆಯವರು. ಸತೀಶ್ ಜಾರಕಿಹೊಳಿ ಬೆಳಗಾಂ ಜಿಲ್ಲೆ. ಆರ್.ಬಿ.ತಿಮ್ಮಾಪುರ್ ಬಾಗಲಕೋಟೆ, ರಹೀಂಖಾನ್ ಬೀದರ್, ಎಂ.ಬಿ.ಪಾಟೀಲ್ ಬಿಜಾಪುರ. ಏಳೂ ಜನ ನೂತನ ಸಚಿವರು ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ. ಬೆಂಗಳೂರು, ಹೊಸಕೋಟೆ ಕ್ಷೇತ್ರದ ಎಂ.ಟಿ.ಬಿ.ನಾಗರಾಜ್ ಮಾತ್ರ ದಕ್ಷಿಣ ಕರ್ನಾಟಕ ಭಾಗದವರಾಗಿದ್ದಾರೆ.

ಇನ್ನು ಜಾತಿವಾರು ಪರಿಗಣನೆಗೆ ತೆಗೆದುಕೊಂಡರೆ ಸಿ.ಎಸ್.ಶಿವಳ್ಳಿ, ಎಂ.ಟಿ.ಬಿ.ನಾಗರಾಜ್ ಕುರುಬ ಸಮುದಾಯದವರು. ತುಕಾರಾಂ, ಜಾರಕಿಹೊಳಿ ಎಸ್‍ಟಿ ಸಮುದಾಯದ ನಾಯಕ ಜನಾಂಗದವರು. ಪರಮೇಶ್ವರ್ ನಾಯಕ್ ಎಸ್‍ಟಿ ಸಮುದಾಯ ಲಂಬಾಣಿಯವರು. ಆರ್.ಬಿ.ತಿಮ್ಮಾಪುರ್ ಎಸ್‍ಸಿ ಸಮುದಾಯ ಎಡಗೈ ಜನಾಂಗದವರು. ರಹೀಂಖಾನ್ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು. ಎಂ.ಬಿ.ಪಾಟೀಲ್ ಲಿಂಗಾಯತ ಸಮುದಾಯದವರು.

ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಪರಿಗಣಿಸಿ ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡಲಾಗಿದೆ. ಹಾಲಿ ಇರುವ ಸಚಿವರ ಜಾತಿ ಪರಿಗಣಿಸಿದರೆ ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಎಸ್‍ಸಿ ಬಲಗೈ, ದೇಶಪಾಂಡೆ ಬ್ರಾಹ್ಮಣ, ಕೆ.ಜೆ.ಜಾರ್ಜ್ ಅಲ್ಪಸಂಖ್ಯಾತ, ಡಿ.ಕೆ.ಶಿವಕುಮಾರ್, ಕೃಷ್ಣಭೆರೇಗೌಡ ಒಕ್ಕಲಿಗ ಸಮುದಾಯ, ಜಮೀರ್ ಅಹಮ್ಮದ್‍ಖಾನ್, ಯು.ಟಿ.ಖಾದರ್, ಮುಸ್ಲಿಂ ಸಮುದಾಯ, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್ ಲಿಂಗಾಯತ ಸಮುದಾಯ, ವೆಂಕಟರಮಣಪ್ಪ ಎಸ್‍ಸಿ ಬೋವಿ, ಜಯಮಾಲಾ ಈಡಿಗ, ಶಿವಶಂಕರರೆಡ್ಡಿ ರೆಡ್ಡಿ ಸಮುದಾಯ, ಪುಟ್ಟರಂಗಶೆಟ್ಟಿ ಉಪ್ಪಾರ ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಕಾಂಗ್ರೆಸ್ ಸಚಿವರಲ್ಲಿ ವೀರಶೈವರು ಯಾರೂ ಇಲ್ಲ. ಮಾದಿಗ ಸಮುದಾಯ ಹಾಗೂ ಹಿಂದುಳಿದವರಿಗೆ ಆದ್ಯತೆ ಕಡಿಮೆ ಇದೆ. ಸಚಿವ ಸ್ಥಾನದಿಂದ ಕೈಬಿಟ್ಟ ಶಂಕರ್ ಅವರ ಸ್ಥಾನಕ್ಕೆ ಎಂ.ಟಿ.ಬಿ.ನಾಗರಾಜ್ ಅವರನ್ನು ತೆಗೆದುಕೊಳ್ಳಲಾಗಿದೆ. ಅದೇ ರೀತಿ ರಮೇಶ್ ಜಾರಕಿಹೊಳಿ ಅವರ ಬದಲಾಗಿ ಅವರ ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ