ಸಚಿವ ಸ್ಥಾನದ ಜೊತೆಗೆ ಸತೀಶ್​ ಜಾರಕಿಹೊಳಿಗೆ ದೊಡ್ಡ ಹೊಣೆಗಾರಿಕೆ​ ನೀಡಿದ ‘ಕೈ’ ನಾಯಕರು

ಬೆಂಗಳೂರುಬೆಳಗಾವಿಯ ಪ್ರಮುಖ ರಾಜಕೀಯ ನಾಯಕ ರಮೇಶ್​ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟಿರುವ ಕಾಂಗ್ರೆಸ್​ ಹೈಕಮಾಂಡ್​ ತಮ್ಮನ ಬದಲು ಅಣ್ಣ ಸತೀಶ್​ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಿದೆ.
ಕಾಂಗ್ರೆಸ್​ನಲ್ಲಿ ಬಂಡಾಯ ಏರ್ಪಡಲು ಕಾರಣರಾಗಿದ್ದ ರಮೇಶ್ ಜಾರಕಿಹೊಳಿ ಮೊನ್ನೆಯಷ್ಟೇ ಬಿಜೆಪಿ ನಾಯಕರು ಏರ್ಪಡಿಸಿದ್ದ ಔತಣಕೂಟದಲ್ಲೂ ಕಾಣಿಸಿಕೊಂಡಿದ್ದರು. ಹೀಗಾಗಿ, ಕಾಂಗ್ರೆಸ್​ ನಾಯಕರಲ್ಲಿ ಅಸಮಾಧಾನ ಏರ್ಪಟ್ಟಿತ್ತು. ಆದರೆ, ಜಾರಕಿಹೊಳಿಯನ್ನು ಸಂಪುಟದಿಂದ ಕೈಬಿಟ್ಟರೆ ಬೆಳಗಾವಿ ಭಾಗದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಧಂಗೆಯೇಳಬಹುದು ಎಂಬ ಭಯವೂ ಪಕ್ಷದ ನಾಯಕರನ್ನು ಕಾಡಿತ್ತು. ಇದೀಗ, ರಮೇಶ್​ ಜಾರಕಿಹೊಳಿ ಸಹೋದರ ಸತೀಶ್​ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್​​ ಸಚಿವ ಸ್ಥಾನದ ಜೊತೆಗೆ ಮೂರು ದೊಡ್ಡ ಹೊಣೆಗಾರಿಕೆಗಳನ್ನು ಕೂಡ ಸತೀಶ್​ ಜಾರಕಿಹೊಳಿಗೆ ನೀಡಿದೆ.
ಏನದು ಹೆಚ್ಚುವರಿ ಹೊಣೆಗಾರಿಕೆ?:
ಸಚಿವ ಸ್ಥಾನದ ಜೊತೆಗೆ ಸತೀಶ್​ ಜಾರಕಿಹೊಳಿ ಅವರಿಗೆ ಮೂರು ಹೆಚ್ಚುವರಿ ಹೊಣೆಗಾರಿಕೆಗಳನ್ನು ನೀಡಲಾಗಿದೆ. ಈ ಬಗ್ಗೆ ಸತೀಶ್​ ಜಾರಕಿಹೊಳಿ ಜೊತೆಗೆ ಚರ್ಚಿಸಿರುವ ಕಾಂಗ್ರೆಸ್​ ನಾಯಕರಾದ ದಿನೇಶ್​ ಗುಂಡೂರಾವ್​ ಮತ್ತು ಸಿದ್ದರಾಮಯ್ಯ, ಕೆಲವು ಸೂಚನೆಗಳನ್ನು ನೀಡಿದ್ದಾರೆ. ರಮೇಶ್​ ಜಾರಕಿಹೊಳಿ ಅವರಿಂದ ಪಕ್ಷಕ್ಕೆ ಹೊಡೆತ ಬೀಳುತ್ತಿದೆ ಎಂದು ಹೇಳಿದ್ದ  ದಿನೇಶ್​ ಗುಂಡೂರಾವ್​  ಅವರನ್ನು ಸಂಪುಟದಿಂದ ಕೈಬಿಡಲೇಬೇಕೆಂದು ಪಟ್ಟು ಹಿಡಿದಿದ್ದರು. ಪಕ್ಷ ವಿರೋಧಿ ಚಟುವಟಿಕೆಯೇ ರಮೇಶ್ ಜಾರಕಿಹೊಳಿಗೆ ಮುಳುವಾಗಿದ್ದು, ಇದೇ ಕಾರಣಕ್ಕೆ ಸತೀಶ್ ಪರವಾಗಿ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್​ ಬ್ಯಾಟಿಂಗ್​ ಮಾಡಿದ್ದರು.

ಸತೀಶ್ ಜಾರಕಿಹೊಳಿಗೆ ಮಂತ್ರಿ ಪದವಿ ಜೊತೆ 3 ಮಹತ್ವದ ಜವಾಬ್ದಾರಿ ನೀಡಿರುವ ಸಿದ್ದರಾಮಯ್ಯ ಮತ್ತು ದಿನೇಶ್​ ಗುಂಡೂರಾವ್, ರಮೇಶ್ ಜಾರಕಿಹೊಳಿ ಜೊತೆ ಇರುವ ಶಾಸಕರ ಮನವೊಲಿಸಬೇಕು, ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳಬೇಕು, ರಮೇಶ್​ ಹಿಂಬಾಲಕರ ಮೂಲಕ ಕ್ಷೇತ್ರದ ಕೆಲಸಗಳನ್ನು ಮಾಡಿಸಬೇಕು, ಬಳ್ಳಾರಿ‌ ಶಾಸಕ ನಾಗೇಂದ್ರ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್
ಅಥಣಿ ಶಾಸಕ ಮಹೇಶ್ ಕಮಟಳ್ಳಿ, ವಿಜಯನಗರ ಶಾಸಕ ಆನಂದ ಸಿಂಗ್, ಹಗರಿಬೊಮ್ಮನಹಳ್ಳಿ ಶಾಸಕ- ಭೀಮಾನಾಯ್ಕ, ಸಿಂಧನೂರು ಶಾಸಕ- ಪ್ರತಾಪಗೌಡ ಪಾಟೀಲ್, ಜೊತೆ ಸಂಪರ್ಕದಲ್ಲಿದ್ದು, ಪಕ್ಷ ಬಿಡದಂತೆ ನೋಡಿಕೊಳ್ಳಬೇಕೆಂಬ ಜವಾಬ್ದಾರಿಗಳನ್ನು ವಹಿಸಲಾಗಿದೆ.
ಅದರ ಜೊತೆಗೆ ಎರಡನೇ ಜವಾಬ್ದಾರಿಯಾಗಿ, ಬೆಳಗಾವಿ ಲೋಕಸಭಾ ಚುನಾವಣೆ ಹೊಣೆಗಾರಿಕೆ ವಹಿಸಲಾಗಿದೆ. 2019ಕ್ಕೆ ಕೈ ಅಭ್ಯರ್ಥಿಯನ್ನು ಗೆಲ್ಲಿಸೋ ಜವಾಬ್ದಾರಿ ನೀಡಲಾಗಿದೆ. ಸದ್ಯ ಬಿಜೆಪಿಯ ಸುರೇಶ್ ಅಂಗಡಿ ಸಂಸದರಿದ್ದಾರೆ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸೋ ತಂತ್ರ ರೂಪಿಸಬೇಕು. ಬೆಳಗಾವಿಯ ಎಲ್ಲಾ ನಾಯಕರ ಜೊತೆ ಸಮನ್ವಯ ಸಾಧಿಸಬೇಕು. ಚುನಾವಣೆ ಗೆಲ್ಲಲು ಈಗಿನಿಂದಲೇ‌ ಪ್ಲಾನ್ ರೂಪಿಸಬೇಕು ಎಂದು ಆದೇಶ ನೀಡಲಾಗಿದೆ.
ಚಿಕ್ಕೋಡಿ ಲೋಕಾಸಭಾ ಕ್ಷೇತ್ರದ ಜವಾಬ್ದಾರಿಯನ್ನು ಸತೀಶ್  ಜಾರಕಿಹೊಳಿ ಹೆಗಲಿಗೆ ನೀಡಲಾಗಿದ್ದು, ಮತ್ತೆ ಚಿಕ್ಕೋಡಿ ಕ್ಷೇತ್ರ ಗೆಲ್ಲಬೇಕು. ಪ್ರಕಾಶ್ ಹುಕ್ಕೇರಿ‌ ಜೊತೆ ಸೇರಿ ಗೆಲುವಿಗಾಗಿ ರಣತಂತ್ರ ರೂಪಿಸಬೇಕು. ಯಾವುದೇ ಕಾರಣಕ್ಕೂ ಬಿಜೆಪಿಗೆ ಅವಕಾಶ ಕೊಡಬಾರದು ಎಂದು ಹೇಳಲಾಗಿದೆ. ಇದೆಲ್ಲವನ್ನೂ ಈಡೇರಿಸಿದರೆ ಸತೀಶ್​ ಜಾರಕಿಹೊಳಿ ರಾಜ್ಯದ ಪ್ರಭಾವಿ ನಾಯಕನಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ