ನವದೆಹಲಿ, ಡಿ.21- ಎಲ್ಲರ ಚಿತ್ತ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರತ್ತ ನೆಟ್ಟಿದೆ. ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ ಆರು ಸ್ಥಾನಗಳನ್ನು ಭರ್ತಿ ಮಾಡಲು, ಹಲವರ ಖಾತೆ ಬದಲಾವಣೆ ಮಾಡಲು ಹೈಕಮಾಂಡ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳೆಲ್ಲ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಹೈಕಮಾಂಡ್ ಯಾರಿಗೆ ಕೈ ಕೊಡಲಿದೆ, ಯಾರನ್ನು ಕೈ ಹಿಡಿಯಲಿದೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಸಂಪುಟದಲ್ಲಿರುವ ಹಲವು ಹಿರಿಯರ ಖಾತೆಗಳನ್ನು ಬದಲಾವಣೆ ಮಾಡುವ ಮೂಲಕ ಸಂಪುಟಕ್ಕೆ ಸರ್ಜರಿ ಮಾಡಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್ನಿಂದ ತಿಳಿದುಬಂದಿದೆ.
ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್, ರಮೇಶ್ ಜಾರಕಿಹೊಳಿ ಅವರ ಖಾತೆಗಳು ಸೇರಿದಂತೆ ಆರು ಸಚಿವರ ಖಾತೆಗಳನ್ನು ಬದಲಿಸುವ ಸಾಧ್ಯತೆ ಇದೆ. ಅದೇ ರೀತಿ ಮೂವರು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಖಾಲಿ ಇರುವ ಆರು ಸಚಿವ ಸ್ಥಾನಗಳ ಜತೆಗೆ, ಖಾಲಿಯಾಗಲಿರುವ ಮೂವರು ಸೇರಿದಂತೆ 9 ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ನವದೆಹಲಿಯಲ್ಲಿದ್ದು, ರಾಹುಲ್ಗಾಂಧಿಯವರ ಜತೆ ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮುಂಚೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಒಟ್ಟಾರೆ ಇಂದು ಸಂಜೆಯೊಳಗೆ ಸಂಪುಟ ವಿಸ್ತರಣೆಯೊ, ಸಂಪುಟ ಪುನಾರಚನೆಯೋ ಎಂಬ ತೀರ್ಮಾನಕ್ಕೆ ಬರಲಿದ್ದಾರೆ.ಕಳೆದ ಆರು ತಿಂಗಳಿನಿಂದ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಲಾಗುತ್ತಿತ್ತು. ಹಲವಾರು ನೆಪಗಳನ್ನು ಹೇಳಿ ಮುಂದೂಡಲಾಗಿತ್ತು. ಆಕಾಂಕ್ಷಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು.ಡಿ.22ರಂದು ಅಂದರೆ ನಾಳೆ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಸೇರಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಸ್ಪಷ್ಟಪಡಿಸಿದ್ದರು.
ಈ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಲು ದೆಹಲಿಗೆ ತೆರಳಿದ್ದರು.ಸಂಪುಟ ವಿಸ್ತರಣೆಯಾಗಬಹುದು, ನಮಗೆ ಸಚಿವ ಸ್ಥಾನ ಸಿಗಬಹುದು ಎಂದು ಹಲವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಏನಾಗಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.ಸಂಭಾವ್ಯರ ಪಟ್ಟಿಯನ್ನು ಕೂಡ ಹೈಕಮಾಂಡ್ಗೆ ಕಳುಹಿಸಲಾಗಿದೆ.ಲೋಕಸಭೆ ಚುನಾವಣೆ ಹತ್ತಿರವಿರುವುದರಿಂದ ಬಂಡಾಯ, ಭಿನ್ನಮತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.ಅದಕ್ಕಾಗಿ ಜಿಲ್ಲಾವಾರು, ಜಾತಿವಾರು ಆಧಾರದಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಕ್ರಮ ಕೈಗೊಳ್ಳಲು ಮುಖಂಡರು ಮುಂದಾಗಿದ್ದಾರೆ.
ಸಂಸದ ಕೆ.ಎಚ್.ಮುನಿಯಪ್ಪ ಅವರು ಎಡಗೈ ಜಾತಿಯಲ್ಲಿ ತಮ್ಮ ಮಗಳಾದ ರೂಪಾ ಶಶಿಧರ್ ಅವರಿಗೆ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಹಿರಿಯರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಅವರು ಕೂಡ ಸಚಿವಾಕಾಂಕ್ಷಿಗಳಾಗಿದ್ದಾರೆ.
ಮೂರ್ನಾಲ್ಕು ಬಾರಿ ಗೆದ್ದಿರುವ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.ಇದೇ ಸಂದರ್ಭದಲ್ಲಿ ಸಂಪುಟ ಸ್ಥಾನಮಾನ ಹೊಂದಿರುವ 10 ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸುವ ಸಾಧ್ಯತೆ ಇದೆ.ಅಲ್ಲದೆ, 30 ಪ್ರಮುಖ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ಕೂಡ ನೇಮಿಸಲು ತೀರ್ಮಾನಿಸಲಾಗಿದೆ. ಯಾವ ಕ್ರಮ ಕೈಗೊಳ್ಳುತ್ತಾರೆ, ಯಾರ ಕೈ ಹಿಡಿಯುತ್ತಾರೆ, ಈ ಸಂದರ್ಭದಲ್ಲಿ ಯಾರಿಗೆ ಅವಕಾಶ ಸಿಗುತ್ತದೆ, ಯಾರು ಅವಕಾಶ ವಂಚಿತರಾಗುತ್ತಾರೋ ಕಾದು ನೋಡಬೇಕಿದೆ.
ಸಂಪುಟ ಪುನಾರಚನೆ ಮಾಡುವುದು ಬೇಡ ಎಂದು ಹಿರಿಯ ಸದಸ್ಯರು ಸಲಹೆ ಮಾಡಿದ್ದಾರೆ.ಖಾಲಿ ಇರುವ ಆರು ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಹಲವರು ಹೇಳುತ್ತಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಕೈ ಹಾಕುವುದು ಬೇಡ ಎಂದು ಹಲವರು ಸಲಹೆ ಮಾಡಿದ್ದಾರೆ. ಹೈಕಮಾಂಡ್ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.