ಈ ಅಧಿವೇಶನದ ಕೊನೆಯ ಒಂದೊವರೆ ದಿನ ಕಲಾಪ ವ್ಯರ್ಥಗೊಳ್ಳಲು ಬಿಜೆಪಿ ಕಾರಣ, ಸಿ.ಎಂ.ಕುಮಾರಸ್ವಾಮಿ

ಬೆಳಗಾವಿ, ಡಿ.21-ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕೊನೆಯ ಒಂದೂವರೆ ದಿನದ ಕಲಾಪ ವ್ಯರ್ಥಗೊಳ್ಳಲು ಬಿಜೆಪಿ ಕಾರಣ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ವಿಧಾನಮಂಡಲದ ಉಭಯ ಸದನಗಳು ಮುಂದೂಡಿಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಆರಂಭದಲ್ಲಿ ಅಧಿವೇಶನ ಸುಗಮವಾಗಿ ನಡೆಯುತ್ತಿತ್ತು. ಇದಕ್ಕಾಗಿ ಉಭಯ ಸದನಗಳ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸುತ್ತೆನೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಸುಮಾರು ಒಂಭತ್ತೂವರೆ ಗಂಟೆ ಕಾಲ ಚರ್ಚೆ ನಡೆದಿದೆ.ಸರ್ಕಾರ ಎಲ್ಲದಕ್ಕೂ ಸಮಪರ್ಕ ಉತ್ತರ ಕೊಟ್ಟಿದೆ ಎಂದರು.

ಸಾಲ ಮನ್ನಾ ವಿಷಯವಾಗಿ ಸದನದ ಒಳಗೆ ಮತ್ತು ಹೊರಗೆ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು.ಸಾಲ ಮನ್ನಾ ವಿಷಯವಾಗಿ ಸರ್ಕಾರ ತೆಗೆದುಕೊಂಡ ನಿರ್ಣಯ ಹಾಗೂ ಕ್ರಮಗಳ ಬಗ್ಗೆ ಸ್ಪಷ್ಟ ಉತ್ತರ ಕೊಡಲು ನಾನು ಸಿದ್ದನಿದ್ದೆ.ಆದರೆ, ಅದಕ್ಕೆ ಬಿಜೆಪಿಯವರು ಅವಕಾಶ ಕೊಡಲಿಲ್ಲ. ಗದ್ದಲ, ಗಲಾಟೆ ಮಾಡಿ ಅಡ್ಡಿಪಡಿಸಿದರು.ಕೊನೆಯ ಒಂದೂವರೆ ದಿನ ಅವರು ಧರಣಿ ನಡೆಸದೇ ಇದಿದ್ದರೆ ಸಾಲಮನ್ನಾದ ಬಗ್ಗೆ ಸ್ಪಷ್ಟ ಮಾಹಿತಿ ಕೊಡುತ್ತಿದೆ.ಕಲಾಪದ ಸಮಯ ವ್ಯರ್ಥವಾಗಲು ಬಿಜೆಪಿ ಕಾರಣ ಎಂದು ವಾಗ್ದಾಳಿ ನಡೆಸಿದರು.

ನಾನು ಉದ್ದಟತನದಿಂದ ಎಲ್ಲಿಯೂ ಮಾತನಾಡಲಿಲ್ಲ. ಬಿಜೆಪಿ ಅನಗತ್ಯವಾಗಿ ಆರೋಪ ಮಾಡುತ್ತಿದೆ.ನಾನು ಬುದ್ದಿವಂತ, ಬೃಹಸ್ಪತಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಯಡಿಯೂರಪ್ಪ ಅವರು ಬುದ್ದಿವಂತರು. ನಾನು ನನ್ನ ಇತಿಮಿತಿಯಲ್ಲಿ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಬೃಹಸ್ಪತಿ ಎಂದು ಕೊಂಡು ಸಾಲ ಮನ್ನಾ ಮಾಡಿಲ್ಲ. ಸಾಲ ಮನ್ನಾದ ಬಗ್ಗೆ ಇನ್ನಷ್ಟು ಸಲಹೆಗಳನ್ನು ಕೊಡಿ ಎಂದು ಬಿಜೆಪಿಯವರನ್ನು ಕೇಳಿದ್ದೆ. ಅವರಿಂದ ಯಾವುದೇ ಸಲಹೆ, ಸಹಕಾರ ಸಿಕ್ಕಿಲ್ಲ. ಬದಲಾಗಿ ರಾಜಕಾರಣಕ್ಕಾಗಿ ಟೀಕೆ ಮಾಡಿದ್ದಾರೆ, ಆರೋಪ ಮಾಡಿದ್ದಾರೆ ಎಂದರು.

ಸಾಲ ಮನ್ನಾ ವಿಷಯವಾಗಿ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚೆ ಮಾಡಲಿದ್ದೇವೆ. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗುವುದು ಎಂದರು.
ಕೃಷಿ ಸಾಲ ಮನ್ನಾ ಮಾಡುವಂತೆ ರೈತರು ದೇಶಾದ್ಯಂತ ಪ್ರತಿಭಟನೆ ನಡೆಸಿದರು.ದೆಹಲಿಯಲ್ಲಿ ಸಾವಿರಾರು ಮಂದಿ ರೈತರು ಪ್ರತಿಭಟನೆ ನಡೆಸಿದಾಗ ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸಲಿಲ್ಲ. ಯಾವೊಬ್ಬ ಸಚಿವರೂ ಹೋಗಿ ರೈತರ ಬಳಿ ಮಾತನಾಡಲಿಲ್ಲ. ರಾಜ್ಯ ಬಿಜೆಪಿ ನಾಯಕರು ಆ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ