ಬೆಂಗಳೂರು,ಡಿ.21- ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮ, ಅವ್ಯವಹಾರಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಆಗ್ರಹಿಸಿರುವ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಕೇಂದ್ರ ಸರ್ಕಾರಕ್ಕೆ ಎಂಟು ಪ್ರಶ್ನೆಗಳ ಮೂಲಕ ಉತ್ತರ ಬಯಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಒಪ್ಪಂದ ಕುರಿತುಈ ಕೆಳಗಿನ ಎಂಟು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
1) 2012ರ ಡಿಸೆಂಬರ್ 12ರಂದು 526.10 ಕೋಟಿ ರೂ.ಗಳಿಗೆ ಆಗಿನ ಯುಪಿಎ ಸರ್ಕಾರ ಮತ್ತು ಫ್ರಾನ್ಸ್ ನಡುವೆ 126 ರಫೇಲ್ ಫೈಟರ್ ಜೆಟ್ಗಳನ್ನು ಖರೀದಿಸಲು ಒಪ್ಪಂದವಾಗಿತ್ತು. 18 ವಿಮಾನಗಳು ಫ್ರಾನ್ಸ್ನಿಂದ ನೇರವಾಗಿ ಭಾರತಕ್ಕೆ ರವಾನಿಸುವ ಹಾಗೂ ಉಳಿದ 108 ವಿಮಾನಗಳನ್ನು ಎಚ್ಎಎಲ್ನಲ್ಲಿ ತಯಾರಿಸುವ ಒಡಂಬಡಿಕೆಯಾಗಿತ್ತು.ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 10, ಏಪ್ರಿಲ್ 2015ರಂದು ಫ್ರಾನ್ಸ್ ಜೊತೆ ಹೊಸ ಒಪ್ಪಂದಕ್ಕೆ ಸಹಿ ಮಾಡಿದರು. ಹಿಂದಿನ ಒಪ್ಪಂದವನ್ನು ರದ್ದುಪಡಿಸಿ ಹೊಸ ಒಡಂಬಡಿಕೆಗೆ ನಿರ್ಧಾರ ಕೈಗೊಳ್ಳುವ ಅಗತ್ಯವೇನಿತ್ತು?
2)ಭಾರತದ ವಾಯುಪಡೆಗೆ 126 ವಿಮಾನಗಳ ಅಗತ್ಯವಿರುವಾಗ ಕೇಂದ್ರ ಸರ್ಕಾರ ಕೇವಲ 36 ವಿಮಾನಗಳನ್ನು ಏಕೆ ಖರೀದಿಸಲು ನಿರ್ಧರಿಸಿತು?
3) ಹೊಸ ಒಪ್ಪಂದದಡಿ ಪ್ರತಿ ವಿಮಾನದ ದರವು 1,670 ಕೋಟಿ ರೂ.ಗಳು ಎಂಬುದು ನಿಜವೇ(ಡೆಸೌಲ್ಟ್ ನಿಂದ ಬಹಿರಂಗಗೊಳಿಸಿರುವಂತೆ) ಇದು ನಿಜವಾದರೆ ಮೂರು ಪಟ್ಟು ಬೆಲೆ ಹೆಚ್ಚಳಕ್ಕೆ ಸಮರ್ಥನೆ ಏನು?
4) ಸರ್ಕಾರವು ಏಕೆ ಕೇವಲ 36 ರಫೇಲ್ ಜೆಟ್ ವಿಮಾನಗಳನ್ನು ಖರೀದಿಸುತ್ತಿದೆ ಮತ್ತು ಡೆಸೌಲ್ಟ್ನಿಂದ ಏಕೆ ಎಲ್ಲ 126 ಸಮರ ವಿಮಾನಗಳನ್ನು ಕೊಳ್ಳುತ್ತಿಲ್ಲ.
5) ಮೊದಲ ವಿಮಾನವು 2019ರ ಸೆಪ್ಟೆಂಬರ್ನಲ್ಲಿ ಮಾತ್ರ ಪೂರೈಕೆ ಯಾಗುವುದಿದ್ದರೆ(ಒಪ್ಪಂದದ ನಾಲ್ಕು ವರ್ಷಗಳ ನಂತರ) ಕೊನೆಯ ವಿಮಾನ 2020ಕ್ಕೆ ಲಭಿಸುತ್ತದೆ. ಹಾಗಾದರೆ ತುರ್ತು ಖರೀದಿಯಲ್ಲಿ ಗುಣಮಟ್ಟ ಹೇಗಿರುತ್ತದೆ?
6) ಈ ಹಿಂದೆ ಎಚ್ಎಎಲ್ಗೆ ತಂತ್ರಜ್ಞಾನ ವರ್ಗಾಯಿಸಲು ಆಗಿದ್ದ ಒಪ್ಪಂದವನ್ನು ರದ್ದುಗೊಳಿಸಲು ಕಾರಣವೇನು?
7) ಕೇಂದ್ರ ಸರ್ಕಾರವು ತಾವು ಯಾವುದೇ ಸಂಸ್ಥೆ ಹೆಸರನ್ನು ಶಿಫಾರಸು ಮಾಡಿಲ್ಲ ಎಂದು ಹೇಳಿದೆ. ಹೀಗಿರುವಾಗ ಎಚ್ಎಎಲ್ ಹೆಸರನ್ನು ಶಿಫಾರಸು ಮಾಡಲು ಅಡ್ಡಿಗೆ ಕಾರಣವಾದ ಅಂಶಗಳೇನು?
8) ಈ ಒಪ್ಪಂದದಲ್ಲಿ ಸಹಭಾಗಿತ್ವ ಹೊಂದಲು ಎಚ್ಎಎಲ್ಗೆ ಅರ್ಹತೆ ಇಲ್ಲವೆ? ಎಚ್ಎಎಲ್ನನ್ನು ದೂರ ಮಾಡಿ ಫ್ರಾನ್ಸ್ನ ಡೆಸೌಲ್ಟ್ ಸಂಸ್ಥೆಯನ್ನು ಓಲೈಸಲು ಕಾರಣವೇನು?
ಈ ಪ್ರಶ್ನೆಗಳಿಗೆ ಉತ್ತರ ಬಯಸಿರುವ ಚಿದಂಬರಂ, ಜೆಪಿಸಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.