ಬೆಳಗಾವಿ, ಡಿ.21- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಉತ್ತರ ಕರ್ನಾಟಕ ಜನತೆಗೆ ಅಪಪಾನ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ನಾವು ಚರ್ಚಿಸಲು ಸಿದ್ದರಿದ್ದೆವು.ಆದರೆ, ಮುಖ್ಯಮಂತ್ರಿ ಪ್ರತಿಷ್ಠೆಗೆ ಬಿದ್ದು ಪಲಾಯನ ಮಾಡಿದರು.ಅಧಿವೇಶನವನ್ನು ಯಾವ ಪುರುಷಾರ್ಥಕ್ಕೆ ನಡೆಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ.ಈವರೆಗೂ ಒಂದೇ ಒಂದು ರೂ.ಸಾಲವನ್ನು ಮನ್ನಾ ಮಾಡಿಲ್ಲ.ಬ್ಯಾಂಕ್ ಅಧಿಕಾರಿಗಳಿಂದ ರೈತರಿಗೆ ಕಿರುಕುಳವೂ ನಿಂತಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದರು.
ಈ ಭಾಗದ ಅನೇಕ ಸಮಸ್ಯೆಗಳ ಬಗ್ಗೆ ನಾವು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೆಂಬ ಸದುದ್ದೇಶ ನನ್ನದಾಗಿತ್ತು.ಆದರೆ, ಯಾವುದಕ್ಕೂ ಅವಕಾಶ ನೀಡದೆ ತರಾತುರಿಯಲ್ಲಿ ಮಸೂದೆಗಳನ್ನು ಅಂಗೀಕಾರ ಮಾಡಿಕೊಂಡಿದ್ದಾರೆ.ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಪ್ರತಿಪಕ್ಷದವರ ಜತೆ ಮಾತುಕತೆ ನಡೆಸಲಿಲ್ಲ.
ಪ್ರತಿಪಕ್ಷಗಳನ್ನು ಹೇಗೆ ನಡೆಸಿಕೊಳ್ಳಬೇಕೆಂಬ ಸೌಜನ್ಯವೂ ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಹಾಗುವವರೆಗೂ ನಾವು ರಾಜ್ಯಾದ್ಯಂತ ಹೋರಾಟ ನಡೆಸಲಿದ್ದೇವೆ. ಇವರ ದೊಂಬರಾಟವನ್ನು ಜನತೆಯ ಮುಂದೆ ಇಡಲಿದ್ದೇವೆ ಎಂದು ಹೇಳಿದರು.