ಸುಳ್ವಾಡಿ ದುರಂತ: ವಿಷಕನ್ಯೆಯ ಜೊತೆ ಮಹದೇವಸ್ವಾಮಿಗೆ ಇತ್ತು ಅಕ್ರಮ ಸಂಬಂಧ!

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ಪ್ರಕರಣ ದಿನದಿಂದದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿ ಮಹದೇವಸ್ವಾಮಿ ಹಾಗೂ ಮತ್ತೋರ್ವ ಆರೋಪಿ ಮಹಿಳೆಯ ನಡುವೆ ಅನೈತಿಕ ಸಂಬಂಧವಿತ್ತು ಎನ್ನುವುದು ವಿಚಾರಣೆ ವೇಳೆ ಬೆಳಕಿದೆ ಬಂದಿದೆ.

ಇಮ್ಮಡಿ ಮಹದೇವಸ್ವಾಮಿ ಮತ್ತು ಅಂಬಿಕಾ ಇಬ್ಬರು ಸೇರಿಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಈ ಇಬ್ಬರು ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಶಾಗ್ಯ ಗ್ರಾಮದವರಾಗಿದ್ದು, ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ.

ಅಂಬಿಕಾ ಮಹದೇವಸ್ವಾಮಿಯನ್ನು ಭೇಟಿಯಾಗಲು ಆಗಾಗ ಪತಿ ಮಾದೇಶ ಜೊತೆಗೆ ಸಾಲೂರು ಮಠಕ್ಕೆ ಬರುತ್ತಿದ್ದಳು. ಹೀಗಾಗಿ ಒಂದೇ ಗ್ರಾಮದವರಾಗಿದ್ದ ಸ್ವಾಮೀಜಿ ಹಾಗೂ ಅಂಬಿಕಾ ನಡುವೆ ಅನೈತಿಕ ಸಂಬಂಧವಿತ್ತು. ಇತ್ತ ಮಹದೇವಸ್ವಾಮಿ ಮಾರಮ್ಮ ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಅಂಬಿಕಾ ಸಹಾಯ ಪಡೆದಿದ್ದಾನೆ.

ವಿಷ ಹಾಕಿದ್ದು ಯಾಕೆ?
ದೇವಸ್ಥಾನ ಟ್ರಸ್ಟಿ ಚಿನ್ನಪ್ಪಿ ಹಾಗೂ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಹೆಸರು ಹಾಳು ಮಾಡುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಕೃತ್ಯದಿಂದ ಟ್ರಸ್ಟಿಗಳು ಜೈಲು ಶಿಕ್ಷೆ ಗುರಿಯಾಗಲಿದ್ದು, ದೇವಸ್ಥಾನದ ಆಡಳಿತ ನಮ್ಮ ಕೈಸೇರುತ್ತದೆ ಎನ್ನುವುದು ಮಹದೇವಸ್ವಾಮಿ ಹಾಗೂ ಅಂಬಿಕಾ ಪ್ಲಾನ್ ಆಗಿತ್ತು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿ ಕೂಡ ಜೈಲು ಸೇರುತ್ತಾರೆ. ಹೀಗಾಗಿ ಮಠ ಹಾಗೂ ದೇವಸ್ಥಾನದ ಆಡಳಿತ ನಮ್ಮ ಕೈಗೆ ಸೇರುತ್ತದೆ ಎನ್ನುವ ದುರಾಲೋಚನೆಯಿಂದ ಈ ಕೃತ್ಯ ಎಸಗಿದ್ದಾರೆ.

ವಿಷ ಬೆರೆಸಿದ್ದು ಹೇಗೆ?:
ಮಹದೇಸ್ವಾಮಿ ಜೊತೆಗೆ ಪ್ಲಾನ್ ರೂಪಿಸಿದ್ದ ಅಂಬಿಕಾ ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿಗೆ ಸುಳ್ಳು ಹೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು. ಈ ಕೀಟನಾಶಕವನ್ನು ಅಂಬಿಕಾ ನಾಗರಕಲ್ಲಿನ ಅರ್ಚಕನಾಗಿದ್ದ ದೊಡ್ಡಯ್ಯನಿಗೆ ನೀಡಿದ್ದಳು.

ದೇವಸ್ಥಾನ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಸಾದ ತಯಾರಿಸುತ್ತಿದ್ದ ಅಡುಗೆಯವರ್ನು ಮಾದೇಶ ಬೇರೆ ಕಡೆಗೆ ಕಳುಹಿಸಿದ್ದ. ಈ ವೇಳೆ ಅಲ್ಲಿಗೆ ಬಂದಿದ್ದ ದೊಡ್ಡಯ್ಯ ತಂಬಡಿ ವಿಷ ಬೆರೆಸಿ ಪರಾರಿಯಾಗಿದ್ದಾನೆ. ಆದರೆ ಈ ಪ್ರಸಾದವನ್ನು ಭಕ್ತರಿಗೆ ಕೊಟ್ಟರೇ ಹೊರತು ದೇವಸ್ಥಾನದ ಟ್ರಸ್ಟ್ ನ ಪದಾಧಿಕಾರಿಗಳು ಸೇವಿಸಲಿಲ್ಲ. ಬದಲಾಗಿ ತಮ್ಮ ಮನೆಯಿಂದ ತಂದಿದ್ದ ಇಡ್ಲಿ ಹಾಗೂ ಪೊಂಗಲ್ ಅನ್ನು ಪೂಜೆಯ ಬಳಿಕ ಸೇವಿಸಿದ್ದಾರೆ.

ಕರ್ಪೂರ ಜಾಸ್ತಿಯಾಗಿದೆ ಎಂದಿದ್ದ:
ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಸಾದ ತಯಾರಿಸಲಾಗಿತ್ತು. ಈ ಪ್ರಸಾದದಿಂದ ವಾಸನೆ ಬರುತ್ತಿದೆ ಎಂದು ಕೆಲವರು ದೂರುತ್ತಿದ್ದಂತೆ, ಕರ್ಪೂರ ಜಾಸ್ತಿಯಾಗಿದೆ ತಿನ್ನಿ ಏನು ಆಗಲ್ಲ ಎಂದು ಆರೋಪಿ ಮಾದೇಶ ಭಕ್ತರಿಗೆ ಒತ್ತಾಯಿಸಿದ್ದ ವಿಚಾರ ಪ್ರಕಟವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ