ಬೆಂಗಳೂರು,ಡಿ.20: ಆಪರೇಷನ್ ಡಾಗ್, ಆಪರೇಷನ್ ರ್ಯಾಟ್ ಆಯ್ತು.. ಇದೀಗ ಶುರುವಾಗುತ್ತಿದೆ ಆಪರೇಷನ್ ಕ್ಯಾಟ್!
ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಹಿಡಿದು ನಿಯಂತ್ರಿಸುವ ಹಾಗೂ ಪುನರ್ವಸತಿ ಕಲ್ಪಿಸುವಂತೆ ರಾಜಭವನದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಬಿಬಿಎಂಪಿಯ ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ರಾಜಭವನದ ಪತ್ರ ಕೈ ಸೇರುತ್ತಿದ್ದಂತೆ ಪಾಲಿಕೆಯ ಅಧಿಕಾರಿಗಳು ರಾಜಭವನದಲ್ಲಿ ಹೆಚ್ಚಾಗಿರುವ ಬೆಕ್ಕುಗಳ ಹಾವಳಿಗೆ ಕಡಿವಾಣ ಹಾಕಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಪಾಲಿಕೆಯ ದಾಖಲೆ ಕೊಠಡಿಯಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದೆ ಎಂದು ಇಲಿ ಬೇಟೆ ಆರಂಭಿಸಿದ್ದ ಪಾಲಿಕೆ ಅಧಿಕಾರಿಗಳು ಇದೀಗ ಬೆಕ್ಕುಗಳ ಬೇಟೆಗೆ ಮುಂದಾಗಿದ್ದಾರೆ.
ರಾಜಭವನದಲ್ಲಿ ಹೆಚ್ಚಾಗಿರುವ ಬೆಕ್ಕುಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ಉದ್ದೇಶದಿಂದ ಈಗಾಗಲೇ ಒಂದು ತಂಡ ರಚಿಸಲಾಗಿದೆ.
ಶೀಘ್ರದಲ್ಲೇ ಬೆಕ್ಕು ಬೇಟೆ ತಂಡ ರಾಜಭವನಕ್ಕೆ ಭೇಟಿ ನೀಡಿ ಕ್ಯಾಟ್ ಆಪರೇಷನ್ ಆರಂಭಿಸಲಿದೆಯಂತೆ.
ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಲೆಕ್ಕದಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಇದೀಗ ಕ್ಯಾಟ್ ಆಪರೇಷನ್ನಲ್ಲೂ ಗೋಲ್ಮಾಲ್ ನಡೆಯುವುದೇ ಎಂಬ ಗುಮಾನಿ ಸಾರ್ವಜನಿಕರನ್ನು ಕಾಡುತ್ತಿದೆ.
ನಗರ ಸಮಸ್ಯೆಗಳ ಆಗರವನ್ನೇ ಹೊದ್ದು ಮಲಗಿದೆ.
ಗುಂಡಿ ಬಿದ್ದ ರಸ್ತೆಗಳು, ಕಸ ವಿಲೇವಾರಿಯಂತಹ ಮೂಲ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡುವ ಕೆಲಸ ಬಿಟ್ಟು ಇದೀಗ ಬೆಕ್ಕುಗಳ ಹಿಂದೆ ಬಿದ್ದಿರುವುದು ಹಾಸ್ಯಾಸ್ಪದವಾಗಿದೆ.