ಬೆಂಗಳೂರು, ಡಿ.20-ಸಹಕಾರ ನಗರದಲ್ಲಿರುವ ನೃತ್ಯೋಮ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆಟ್ರ್ಸ್ ನಾಟ್ಯಸಂಸ್ಥೆ ಇದೇ 24 ರಂದು ಸಂಜೆ 5.30ಕ್ಕೆಮಲ್ಲೇಶ್ವರದ ಸೇವಾಸದನದಲ್ಲಿ ವಾರ್ಷಿಕೋತ್ಸವ ಸಂಭ್ರಮ ಹಮ್ಮಿಕೊಂಡಿದೆ.
ಸಂಸ್ಥೆಯ ನಿರ್ದೇಶಕಿ ರಾಧಿಕಾ ಎಂ.ಕೆ.ಸ್ವಾಮಿ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಕ್ಷಮತೆ ತೋರುತ್ತ, ಬದ್ಧತೆಯಿಂದ ನೂರಾರು ನಾಟ್ಯಾಂಕಾಂಕ್ಷಿಗಳಿಗೆ ನೃತ್ಯ ಶಿಕ್ಷಣ ನೀಡುತ್ತಿರುವ ವಿದುಷಿ, ನಾಟ್ಯ ಮಯೂರಿ ಆರ್ಯಭಟ ಪ್ರಶಸ್ತಿ ವಿಜೇತೆ ರಾಧಿಕಾ ಎಂ.ಕೆ.ಸ್ವಾಮಿ ದೇಶಾದ್ಯಂತ ಸಾವಿರಾರು ನೃತ್ಯ ಪ್ರದರ್ಶನಗಳನ್ನು ನೀಡಿ ಹೆಸರು ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಸಿದ್ಧ ನಾಟ್ಯಗುರು ಡಾ.ಸಂಜಯ್ಶಾಂತಾರಾಂ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ರಾಧಿಕಾ, ಸುಮಾರು 25 ವರ್ಷಗಳ ಕಾಲ ತರಬೇತಿ ಪಡೆದ ಭರತನಾಟ್ಯ ಮತ್ತು ಕೂಚಿಪುಡಿ ಉಭಯಶೈಲಿಗಳ ನಾಟ್ಯ ಪರಿಣತಿ ಹೊಂದಿದ್ದಾರೆ.
ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತಗಳ ಪರೀಕ್ಷೆಯಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನವನ್ನು ಅನುಕ್ರಮವಾಗಿ ಪಡೆದಿದ್ದು, ವಿಶ್ವ ಪ್ರಸಿದ್ಧ ಹಂಪಿ ಉತ್ಸವ, ಮೈಸೂರು ದಸರಾ ಉತ್ಸವ, ನಟರಾಜೋತ್ಸವ, ಬ್ರಹ್ಮೋತ್ಸವ, ಚಿದಂಬರದ ನಾಟ್ಯಾಂಜಲಿ ಉತ್ಸವಗಳಲ್ಲಿ ನರ್ತಿಸಿದ ಹಿರಿಮೆ ಇವರದು.
ನೃತ್ಯೋಮ ಅಕಾಡೆಮಿ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಸಿಕರಕಣ್ಮನ ತುಂಬುವ ನೃತ್ಯ ಪ್ರದರ್ಶನಗಳನ್ನು ನೀಡಲಿದೆ.ಸರ್ವರಿಗೂ ಮುಕ್ತ ಸ್ವಾಗತ.