ಬೆಳಗಾವಿ(ಸುವರ್ಣಸೌಧ), ಡಿ.20- ರೈತರ ಸಾಲ ಮನ್ನಾ ಯೋಜನೆಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಯಾವುದೇ ರೀತಯ ಸಂಬಂಧಿವಲ್ಲ. ಸಾಲ ಮನ್ನಾದಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿ ಇತರೆ ಯೋಜನೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಪರಿಷತ್ನಲ್ಲಿ ಸ್ಪಷ್ಟಪಡಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಪ್ರತಿ ಪಕ್ಷ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ, ರೈತರು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಬೆಳೆ ಸಾಲ ಮನ್ನಾ ಮಾಡಲು ಪ್ರತ್ಯೇಕವಾಗಿ ಅನುದಾನವನ್ನು ಮೀಸಲಿಟ್ಟಿದ್ದೇವೆ. ಇದರಿಂದ ಬೇರೆ ಯಾವುದೇ ಯೋಜನೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಪುನರುಚ್ಚರಿಸಿದರು.
ಸಾಲ ಮನ್ನಾ ಯೋಜನೆಗಾಗಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ಅನುದಾನವನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.ಇದು ಸತ್ಯಕ್ಕೆ ದೂರವಾದ ಮಾತು.ಸಾಲ ಮನ್ನಾದಿಂದ ಅಭಿವೃದ್ಧಿ ಯೋಜನೆಗಳು ಕುಂಟಿತವಾಗುವುದಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ಹೇಳಿದರು.
ಗಡಿ ವಿವಾದವನ್ನು ಮುಂದಿಟ್ಟುಕೊಂಡು ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ಮಹಾರಾಷ್ಟ್ರದವರಿಗೆ ಸ್ಪಷ್ಟ ಸಂದೇಶ ನೀಡುವುದಕ್ಕಾಗಿಯೇ ಇಲ್ಲಿ ಸುವರ್ಣ ಸೌಧ ಕಟ್ಟಿಸಿದೆವು.2006ರಲ್ಲಿ ನಾವು ಬಿಜೆಪಿಯವರು ಸರ್ಕಾರ ರಚನೆ ಮಾಡಿದಾಗ ಮೊಟ್ಟ ಮೊದಲ ಬಾರಿಗೆ ಕೆಎಲ್ಡಿಎನಲ್ಲಿ ಅಧಿವೇಶನ ನಡೆಸಿದೆವು.2006ರಲ್ಲಿ ಅಂದಿನ ಕೇಂದ್ರ ಗೃಹ ಸಚಿವರು ಮಹಾರಾಷ್ಟ್ರದವರು. ಪ್ರಧಾನಿಯವರನ್ನು ಭೇಟಿ ಮಾಡಿದ ನಿಯೋಗ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಬೇಡಿಕೆ ಇಟ್ಟಿತ್ತು. ಇದಕ್ಕಾಗಿ ಅಂದಿನ ನಮ್ಮ ಸರ್ಕಾರ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ.ಇಡೀ ಕರ್ನಾಟಕದ ಜನತೆ ನಿಮ್ಮ ಜತೆಗಿದೆ ಎಂಬ ಸಂದೇಶವನ್ನು ನೀಡುವುದಕ್ಕಾಗಿಯೇ ವರ್ಷದಲ್ಲಿ ಒಂದು ಬಾರಿ ಅಧಿವೇಶನ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದರು.
ಅಧಿವೇಶನ ನಡೆಸುವುದರ ಜತೆಗೆ ಶಾಶ್ವತವಾದ ಸುವರ್ಣ ಸೌಧ ಕಟ್ಟಿಸಲಾಯಿತು. ಅಧಿವೇಶನ ನಡೆಸುವುದು ಕೇವಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೇ ಚರ್ಚೆ ನಡೆಸುವುದಲ್ಲ. ಸಮಗ್ರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶ ಎಂದು ಹೇಳಿದರು.
ಡಾ.ನಂಜುಂಡಪ್ಪ ವರದಿ, ಕೃಷ್ಣ ಬಿ ಸ್ಕೀಮ್ ಸೇರಿದಂತೆ ಈ ಭಾಗದ ಯಾವುದೇ ಚರ್ಚೆ ನಡೆದರೆ ಸರ್ಕಾರ ಉತ್ತರ ನೀಡಲು ಸಿದ್ದವಿದೆ. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದು ನಮಗೂ ಅನಿವಾರ್ಯವಿದೆ.ನೀವು ಕೇಳುವ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಲು ಸರ್ಕಾರ ಸಿದ್ದವಿದೆ. ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ ಸಭಾಧ್ಯಕ್ಷರು ಒಂದು ಬಾರಿ ರೂಲಿಂಗ್ ನೀಡಿದರೆ ಪುನಃ ಪ್ರಶ್ನಿಸುವುದು ಸರಿಯಲ್ಲ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ಪೂಜಾರಿ, ಈ ಭಾಗದಲ್ಲಿ ಬರಗಾಲ ಸೇರಿದಂತೆ ಇತರೆ ಸಮಸ್ಯೆಗಳಿದ್ದು, ಸರ್ಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶ ಎಂದರು.
ಇದಕ್ಕೆ ಉತ್ತರಿಸಿದ ಸಿಎಂ, ಯಾವ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿ. ಇಲ್ಲಿಯೇ ಪರಿಹರಿಸುತ್ತೇವೆ. ಅಧಿವೇಶನ ನಡೆಸುವ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುವುದು ಸರ್ವೆ ಸಾಮಾನ್ಯ. ಹಿಂದಿನ ಅವಧಿಗೆ ಹೋಲಿಸಿದರೆ ಈ ಬಾರಿ ಅತ್ಯಂತ ಕಡಿಮೆ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ನಾನೇ ಮುಖಂಡರನ್ನು ಭೇಟಿ ಮಾಡಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದೇನೆ. ಸಮಗ್ರ ಕರ್ನಾಟಕ ನಮ್ಮ ಸರ್ಕಾರದ ಪರಿಕಲ್ಪನೆ ಎಂದು ಹೇಳಿದರು.