ನವದೆಹಲಿ: ಕಳೆದ 6 ತಿಂಗಳಿಂದ ರಾಜ್ಯಪಾಲರ ಆಡಳಿತದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ನಾಳೆಯಿಂದ ರಾಷ್ಟ್ರಪತಿಗಳ ಆಡಳಿತಕ್ಕೆ ಒಳಪಡಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದೆ.
ಇಂದಿಗೆ ರಾಜ್ಯಪಾಲರ ಆಡಳಿತ ಕೊನೆಗೊಳ್ಳಲಿದ್ದು, ನಾಳೆ (ಗುರುವಾರ)ಯಿಂದ ರಾಷ್ಟ್ರಪತಿಗಳ ಆಡಳಿತ ಜಾರಿಯಾಗಲಿದೆ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕೇಂದ್ರವು ರಾಷ್ಟ್ರಪತಿಗಳ ಆಡಳಿತಕ್ಕೆ ಶಿಫಾರಸು ಮಾಡಿದೆ.
ಕೇಂದ್ರ ಗೃಹ ಇಲಾಖೆಯ ಮಾಹಿತಿಯಂತೆ, ಸಚಿವ ಸಂಪುಟವು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿಗಳ ಆಡಳಿತಕ್ಕೆ ಅನುಮತಿ ನೀಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಾಳೆಯಿಂದ ರಾಜ್ಯದ ಶಾಸಕಾಂಗವು ಸಂಸತ್ತಿನ ಅಧೀನದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಘೋಷಿಸಲಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.
ಕಳೆದ ಜೂನ್ನಲ್ಲಿ ರಾಜಕೀಯವಾಗಿ ಅತಂತ್ರಗೊಂಡು ಜಮ್ಮು ಮತ್ತು ಕಾಶ್ಮೀರದ ಶಾಸಕಾಂಗವು ಉರುಳಿಬಿದ್ದಿತ್ತು. 25 ಮಂದಿ ಬಿಜೆಪಿಗರು ತಮ್ಮ ಬೆಂಬಲ ವಾಪಸ್ ಪಡೆದಿದ್ದರಿಂದ ಮೆಹಬೂಬ್ ಮಫ್ತಿ ಅವರ ಮೈತ್ರಿ ಸರ್ಕಾರ ಪತನಗೊಂಡಿತ್ತು. ಇದಾದ ತಕ್ಷಣವೇ 6 ತಿಂಗಳ ಕಾಲ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿತ್ತು. ಈಗ ರಾಷ್ಟ್ರಪತಿಗಳ ಆಳ್ವಿಕೆಯಲ್ಲಿ ರಾಜ್ಯ ಕಾರ್ಯನಿರ್ವಹಿಸಬೇಕಿದೆ.
ಇನ್ನು 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಯಲ್ಲಿಯೇ ರಾಜ್ಯವಿರಲಿದ್ದು, ಆನಂತರ ಚುನಾವಣೆ ಎದುರಿಸಲಿದೆ. ಒಂದು ವೇಳೆ ಆನಂತರವೂ ಚುನಾವಣೆ ಘೋಷಣೆಯಾಗದಿದ್ದರೆ ರಾಷ್ಟ್ರಪತಿಗಳ ಆಡಳಿತ ಮುಂದಿನ 6 ತಿಂಗಳವರೆಗೆ ಮುಂದುವರೆಯಲಿದೆ.