ಸುಳ್ವಾಡಿ ಮಾರಮ್ಮ ದೇವಸ್ಥಾನ ದುರಂತ; ಪ್ರಸಾದಕ್ಕೆ ವಿಷ ಹಾಕಿದ್ದ ಅರ್ಚಕ ದೊಡ್ಡಯ್ಯ ಹೇಳಿದ್ದೇನು?

ಚಾಮರಾಜನಗ: ಸುಳ್ವಾಡಿಯ ಮಾರಮ್ಮ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಘಟನೆಯ ತನಿಖೆ ಅಂತಿಮ ಹಂತ ತಲುಪಿದ್ದು, ತಾನೇ ಪ್ರಸಾದಕ್ಕೆ ವಿಷ ಹಾಕಿದ್ದಾಗಿ ಮಾರಮ್ಮ ದೇವಸ್ಥಾನದ ಪಕ್ಕದಲ್ಲಿರುವ ನಾಗರಕೊಯಿಲ್​ ದೇಗುಲದ ಅರ್ಚಕ ದೊಡ್ಡಯ್ಯ ತಪ್ಪೊಪ್ಪಿಕೊಂಡಿದ್ದಾನೆ.

ಘಟನೆ ಸಂಬಂಧ ನಿನ್ನೆ ಸುಳ್ವಾಡಿ ಮಾರಮ್ಮ ದೇವಸ್ಥಾನದ ಟ್ರಸ್ಟ್​ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ , ಮ್ಯಾನೇಜರ್​ ಮಾದೇಶ, ಆತನ ಹೆಂಡತಿ ಅಂಬಿಕಾ ಹಾಗೂ ನಾಗರಕೊಯಿಲು ದೇವಸ್ಥಾನದ ಅರ್ಚಕ ದೊಡ್ಡಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇಮ್ಮಡಿ ಮಹದೇವಸ್ವಾಮೀಜಿಯೇ ಈ ದುರಂತದ ಕಿಂಗ್​ಪಿನ್​ ಎಂಬುದು ಬಯಲಾಗಿತ್ತು.

ವಿಚಾರಣೆ ವೇಳೆ ನಿನ್ನೆ ಅಂಬಿಕಾ ತಾನೇ ವಿಷ ಹಾಕಿಸಿದ್ದಾಗಿ ಒಪ್ಪಿಕೊಂಡಿದ್ದರು. ನಂತರ ಅರ್ಚಕ ದೊಡ್ಡಯ್ಯನೇ ಖುದ್ದಾಗಿ ಪ್ರಸಾದಕ್ಕೆ ಕ್ರಿಮಿನಾಶಕ ಬೆರೆಸಿರುವುದು ಸಾಬೀತಾಗಿದೆ. ಇಂದು ಆರೋಪಿಗಳನ್ನು ಪೊಲೀಸರು ಕೊಳ್ಳೇಗಾಲದ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.  ಆರೋಪಿಗಳ ರಕ್ಷಣೆಗೆ ರಾಜಕೀಯ ಒತ್ತಡವಿರುವ ಹಿನ್ನೆಲೆಯಲ್ಲಿ  ಕೋರ್ಟ್​ ಬಳಿ ಹಾಗೂ ಡಿವೈಎಸ್​ಪಿ ಕಚೇರಿ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಾರಮ್ಮನ ದೇವಸ್ಥಾನದ ಟ್ರಸ್ಟ್​ನಲ್ಲಿ ಎರಡು ಬಣಗಳಾಗಿತ್ತು. ಹೇಗಾದರೂ ಮಾಡಿ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಆಲೋಚನೆ ಇಮ್ಮಡಿ ಮಹದೇವ ಸ್ವಾಮೀಜಿಯದ್ದಾಗಿತ್ತು. ಅದಕ್ಕಾಗಿ ಪ್ರಸಾದಕ್ಕೆ ವಿಷ ಬೆರೆಸಿದರೆ ಭಕ್ತರಿಗೆ ವಾಂತಿ-ಭೇದಿಯಾಗುತ್ತದೆ. ಇದರಿಂದ ಕಾರ್ಯಕ್ರಮ ಆಯೋಜಕರ ಬಗ್ಗೆ ಜನರಲ್ಲಿ ಅಸಮಾಧಾನ ಮೂಡುತ್ತದೆ. ನಂತರ ದೇವಸ್ಥಾನ ಸಂಪೂರ್ಣವಾಗಿ ತಮ್ಮ ವಶವಾಗುತ್ತದೆ ಎಂದು ಯೋಚಿಸಿ ಈ ವಿಷ ಹಾಕುವ ನಿರ್ಧಾರಕ್ಕೆ ಬಂದಿದ್ದರು ಕಿರಿಯ ಶ್ರೀ ಇಮ್ಮಡಿ ಮಹದೇವ ಸ್ವಾಮೀಜಿ.

ತಾವು ಆ ಸಮಾರಂಭಕ್ಕೆ ಬಂದರೆ ತಮ್ಮ ಮೇಲೆ ಅನುಮಾನ ಬರಬಹುದೆಂದು ತಮಗೆ ಆಪ್ತರನ್ನು ಶ್ರೀಗಳು ಮುಂದೆ ಬಿಟ್ಟಿದ್ದರು.  ಬಳಿಕ ಶ್ರೀಗಳ ಆದೇಶದಂತೆ ಮ್ಯಾನೇಜರ್ ಹಾಗೂ ಆತನ ಹೆಂಡತಿ ಅಂಬಿಕಾ ಕ್ರಿಮಿನಾಶಕವನ್ನು ತಂದು ನಾಗರಕೊಯೀಲು ಎಂಬ ದೇವಸ್ಥಾನದ ಅರ್ಚಕ ದೊಡ್ಡಯ್ಯನಿಗೆ ನೀಡಿ  ಪ್ರಸಾದಕ್ಕೆ ಬೆರೆಸುವಂತೆ ಆದೇಶಿಸಿದ್ದರು. ಮೂವರ ಅಣತಿಯಂತೆ ದೊಡ್ಡಯ್ಯ‌ ಶಂಕುಸ್ಥಾಪನೆ ಸಮಾರಂಭದ ದಿನ ಎಲ್ಲರ ಕಣ್ತಪ್ಪಿಸಿ ಪ್ರಸಾದಕ್ಕೆ ಕ್ರಿಮಿನಾಶಕ ಬೆರೆಸಿದ್ದರು. ಇದೇ ಇಮ್ಮಡಿ ಮಹದೇವಸ್ವಾಮೀಜಿ ಅವರು ದೊಡ್ಡಯ್ಯನಿಗೆ ಮಾರಮ್ಮ ದೇವಸ್ಥಾನದ ಪಕ್ಕದಲ್ಲಿದ್ದ ನಾಗರಕೊಯಿಲ್ ದೇವಸ್ಥಾನದಲ್ಲಿ ಅರ್ಚಕ ಹುದ್ದೆ ಕೊಡಿಸಿದ್ದರು. ಅಲ್ಲದೆ, ದೇವಸ್ಥಾನದ ಹುಂಡಿ, ಕಾಣಿಕೆ ಹಣವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದರು. ಹಾಗಾಗಿ, ಸ್ವಾಮೀಜಿಗೆ ದೊಡ್ಡಯ್ಯ ನಿಷ್ಟನಾಗಿದ್ದ.

ಗೊತ್ತಿದ್ದೂ ಸುಮ್ಮನಿದ್ದ ಅಡುಗೆಭಟ್ಟ:
ವಿಷ ಪ್ರಾಶನದಲ್ಲಿ ಅಡುಗೆ ಭಟ್ಟ ಪುಟ್ಟಸ್ವಾಮಿ ಪಾತ್ರವೂ ಇದೆ ಎನ್ನಲಾಗಿದೆ. ಮಾದೇಶ, ಅಂಬಿಕಾ ಪ್ರಸಾದಕ್ಕೆ ವಿಷ ಹಾಕುವ ವಿಚಾರ ಪುಟ್ಟಸ್ವಾಮಿಗೆ ತಿಳಿದಿತ್ತು. ಪುಟ್ಟಸ್ವಾಮಿ ಗಮನಕ್ಕೆ ತಂದೇ ಆರೋಪಿಗಳು ವಿಷ ಹಾಕಿದ್ದರು. ಸಾಲೂರು ಮಠದ ಮಹದೇವಸ್ವಾಮೀಜಿ ಸೂಚನೆ ಮೇರೆಗೆ ವಿಷ ಬೆರೆಸುತ್ತಿರುವುದಾಗಿ ದೊಡ್ಡಯ್ಯ ಹೇಳಿದ್ದರಿಂದ ಪುಟ್ಟಸ್ವಾಮಿ ಸುಮ್ಮನಾಗಿದ್ದ. ಪುಟ್ಟಸ್ವಾಮಿಗೂ ಹಣ ನೀಡುವುದಾಗಿ ಆಮಿಷವೊಡ್ಡಲಾಗಿತ್ತು. ಹಾಗಾಗಿ, ವಿಷ ಬೆರೆಸಿರುವ ವಿಚಾರ ತಿಳಿದು ಸುಮ್ಮನಿದ್ದ ಪುಟ್ಟಸ್ವಾಮಿ ತನ್ನ ಮೇಲೆ ಯಾರಿಗೂ ಅನುಮಾನ ಬಾರದಿರಲಿ ಎಂದು ಸ್ವಲ್ಪ ಪ್ರಸಾದ ಸೇವಿಸಿದ್ದ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ