ಪೊಲೀಸರ ಖದರ್ಗೆ ಬೆಚ್ಚಿಬಿದ್ದ ನಗರದ ರೌಡಿಗಳು

ಬೆಂಗಳೂರು,ಡಿ.19: ಬೆಳ್ಳಂಬೆಳಗ್ಗೆ ಪೊಲೀಸರ ಖದರ್‍ಗೆ ನಗರದ ರೌಡಿಗಳು ಬೆಚ್ಚಿ ಬಿದ್ದಿದ್ದಾರೆ!

ಚುಮು ಚುಮು ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಕುಖ್ಯಾತ ರೌಡಿ ಶೀಟರ್‍ಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿ ಠಾಣೆಗೆ ಕರೆತಂದಿದ್ದಾರೆ.

ಹಲ್ಲೆ, ದರೋಡೆ, ಕೊಲೆ, ಕೊಲೆಯತ್ನ, ರಿಯಲ್‍ಎಸ್ಟೇಟ್‍ದಂಧೆ ಸೇರಿದಂತೆ ಸಮಾಜದ್ರೋಹಿ ಚಟುವಟಿಕೆಯಲ್ಲಿತೊಡಗಿಸಿಕೊಂಡಿದ್ದ ಕೆ.ಆರ್.ಪುರ ಅಜಿತ್, ತೊದ್ಲು ಮಂಜ, ವೇಡಿಯಪ್ಪ, ಬಾಕ್ಸರ್ ನಾಗ, ಜೈಕುಮಾರ, ಭರತ ಅಲಿಯಾಸ್ ಬಂಗಾರಿ ಸೇರಿದಂತೆ ಹಲವು ರೌಡಿ ಶೀಟರ್‍ಗಳು ಬಲೆಗೆ ಬಿದ್ದಿದ್ದಾರೆ.

ಆದರೆ, ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಲ್ಲಿ ಸಂಭವಿಸುವ ಅಪರಾಧ ಚಟುವಟಿಕೆಯ ಹಿಂದಿರುವ ಪ್ರಮುಖ ಆರೋಪಿ ಸೈಲಂಟ್ ಸುನೀಲ ಮಾತ್ರ ಪೊಲೀಸರ ಖೆಡ್ಡಕ್ಕೆ ಬಿದ್ದಿಲ್ಲ.

ದಾಳಿಗಿಳಿದ 8 ತಂಡ:
ನಗರದಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿರುವ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಹೆಚ್ಚುವರಿ ಪೊಲೀಸ್‍ ಆಯುಕ್ತ ಅಲೋಕ್‍ ಕುಮಾರ್ ನೀಡಿದ ಸೂಚನೆ ಮೇರೆಗೆ ರೌಡಿಗಳ ಬಂಧನಕ್ಕಾಗಿ 8 ತಂಡಗಳನ್ನು ರಚಿಸಲಾಗಿತ್ತು.

ಬೆಳ್ಳಂ ಬೆಳಗ್ಗೆ ಬೆಂಗಳೂರಿನ ಪೂರ್ವ ಹಾಗೂ ಈಶಾನ್ಯ ವಿಭಾಗ ವ್ಯಾಪ್ತಿಯ ಯಲಹಂಕ, ಕೊಡಿಗೆ ಹಳ್ಳಿ, ಬೈಯಪ್ಪನಹಳ್ಳಿ, ಅಮೃತಹಳ್ಳಿ, ಬಾಗಲೂರು,ಕೆಜಿ ಹಳ್ಳಿ, ಬಾಣಸವಾಡಿ, ಡಿಜೆ ಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಸಿಸಿಬಿಯ 8 ತಂಡಗಳು ಹಲವಾರು ರೌಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ರೌಡಿಗಳ ಜೊತೆಗೆ ಮಾರಕಾಸ್ತ್ರಗಳು, ಆಸ್ತಿ ಪತ್ರಗಳು ಸೇರಿದಂತೆ ಹಲವಾರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ನಗರದಲ್ಲಿಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಹಿನ್ನಲೆ ರೌಡಿಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಗಿತ್ತು.ಆದರೂ ಕೆಲವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಏಕಾಏಕಿ ಈ ದಾಳಿ ನಡೆದಿದೆ.

ಪೊಲೀಸರಿಗೆ ಸಿಕ್ಕಿ ಬಿದ್ದಿರುವ ರೌಡಿಗಳಿಗೆ ಕೊನೆ ಎಚ್ಚರಿಕೆ ನೀಡಲಾಗಿದೆ.ಇನ್ನು ಮುಂದೆ ಉತ್ತಮ ಪ್ರಜೆಗಳಾಗಿ ಜೀವನ ನಡೆಸಿ, ಅದನ್ನು ಬಿಟ್ಟು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ