ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಬೇಕು ಎಂದು ಮಹಾರಾಷ್ಟ್ರದ ರೈತ ಮುಖಂಡರೊಬ್ಬರು ಆರ್ ಎಸ್ ಎಸ್ ಗೆ ಒತ್ತಾಯಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ನಿತಿನ್ ಗಡ್ಕರಿ ಅವರನ್ನು ಪ್ರಧಾನಿಯನ್ನಾಗಿ ನೇಮಿಸಬೇಕು ಎಂದು ವಸಂತ್ರೋ ನಾಯಕ್ ಶ್ವೇಟಿ ಸ್ವಾವಲಂಬನ ಮಿಷನ್ ಅಧ್ಯಕ್ಷ ಕಿಶೋರ್ ತಿವಾರಿ ಹೇಳಿದ್ದಾರೆ.
ಈ ಕುರಿತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪ್ರಧಾನ ಕಾರ್ಯದರ್ಶಿ ಬೈಯ್ಯಾಜಿ ಸುರೇಶ್ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ, ಚತ್ತೀಸ್ ಗಡ ಮತ್ತು ರಾಜಸ್ತಾನಗಳ ಫಲಿತಾಂಶ ನೋಡಿದರೇ ಅಹಂಕಾರ ಪಡುತ್ತಿದ್ದ ನಾಯಕರು ಸೋತಿದ್ದಾರೆ, ಹೀಗಾಗಿ ಮೋದಿ ಅವರ ನಾಯಕತ್ವವನ್ನೂ ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.
ಮೋದಿ ಮತ್ತು ಅಮಿತ್ ಶಾ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ. ಇದೇ ಕಾರಣದಿಂದಾಗಿ ಹಲವು ರಾಜ್ಯಗಳಲ್ಲಿ ಬಿಜೆಪಿ ಸೋಲಲು ಕಾರಣವಾಗಿದೆ ಎಂದು ಹೇಳಿದ್ದಾರೆ.